ಪಿರಿಯಾಪಟ್ಟಣ ತಾಲ್ಲೂಕಿನ ಚಿಟ್ಟೇನಹಳ್ಳಿ, ಹುಣಸವಾಡಿ, ಕೊಪ್ಪ ಆವರ್ತಿ ಹಾಗು ದೊಡ್ಡ ಕಮರವಳ್ಳಿ ಗ್ರಾಮ ಪಂಚಾಯಿತಿ ಗಳಲ್ಲಿ ಕೊರೊನಾ ನಿರ್ವಹಣೆ ಸಂಬಂಧ ಶಾಸಕ ಕೆ.ಮಹದೇವ್ ಸಭೆ ನಡೆಸಿದರು. 27/05/2021

ಈ ವೇಳೆ ಮಾತನಾಡಿದ ಶಾಸಕ ಕೆ.ಮಹದೇವ್ ರವರು ಗ್ರಾಮಾಂತರ ಪ್ರದೇಶದ ಜನತೆ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸುವ ಮೂಲಕ ಕೊರೊನಾ ಮುಕ್ತ ಹಳ್ಳಿಗಳನ್ನು ಮಾಡುವ ನಿಟ್ಟಿನಲ್ಲಿ ಸಹಕರಿಸಬೇಕು, ಪಿಡಿಒ ಹಾಗೂ ಆಡಳಿತ ವರ್ಗ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಸೋಂಕಿತರು ಹಳ್ಳಿಗಳಲ್ಲಿ ಕಂಡುಬಂದಾಗ ಹೋಮ್  ಐಸೊಲೇಶನ್ ಮಾಡದೆ ಕೊವಿಡ್ ಕೇರ್ ಸೆಂಟರ್ ಗಳಿಗೆ ಸ್ಥಳಾಂತರಿಸುವ ಮೂಲಕ ಸೋಂಕು ಹೆಚ್ಚು ಹರಡದಂತೆ ನಿಗಾ ವಹಿಸುವಂತೆ ಸೂಚಿಸಿದರು.

ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ಈಗಾಗಲೇ ಗ್ರಾ.ಪಂ ಮುಖಾಂತರ ಪ್ರತಿ ಹಳ್ಳಿಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಿ ಮನೆ ಮನೆ ಸರ್ವೆ ಕಾರ್ಯ ನಡೆಸಿ ಕರಪತ್ರಗಳನ್ನು ಹಂಚಿ ಧ್ವನಿವರ್ಧಕದಲ್ಲಿ ಪ್ರಚಾರ ಮಾಡುವ ಮೂಲಕ ಸೋಂಕಿನ ಬಗ್ಗೆ ಹಳ್ಳಿ ಜನರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ ಎಂದರು.

ತಹಸೀಲ್ದಾರ್ ಕೆ.ಚಂದ್ರಮೌಳಿ ಮಾತನಾಡಿ ತಾಲ್ಲೂಕು ಆಡಳಿತ ವತಿಯಿಂದ ಆರೋಗ್ಯ, ಆರಕ್ಷಕ, ಗ್ರಾ.ಪಂ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ತಾಲ್ಲೂಕನ್ನು ಕೊರೊನಾ ಮುಕ್ತ ಮಾಡುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆ ಸರ್ವೆ ಕಾರ್ಯ ನಡೆಸಿ ಸೋಂಕಿನ ಲಕ್ಷಣ ಉಳ್ಳವರನ್ನು ಪತ್ತೆಹಚ್ಚಿ ಮೆಡಿಸಿನ್ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.

ಕೋಮಾಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವೈ.ವಿ ಪ್ರಕಾಶ್ ಮಾತನಾಡಿ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದರೆ ಸಾರ್ವಜನಿಕರು ಹಿಂಜರಿಯದೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕೋರಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡುವಂತೆ ತಿಳಿಸಿದರು.

ಈ ವೇಳೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಮೆಡಿಸಿನ್ ಕಿಟ್ ಗಳನ್ನು ನೀಡಲಾಯಿತು.

ಈ ಸಂದರ್ಭ ತಾ.ಪಂ ಮಾಜಿ ಸದಸ್ಯರಾದ ಎಸ್.ರಾಮು, ಎ.ಟಿ ರಂಗಸ್ವಾಮಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಚಿಟ್ಟೇನಹಳ್ಳಿ ಗ್ರಾ.ಪಂ ಅಧ್ಯಕ್ಷ ಮಹದೇವ್, ಪಿಡಿಒ ನರಸಿಂಹಮೂರ್ತಿ,  ಹುಣಸವಾಡಿ ಗ್ರಾ.ಪಂ ಅಧ್ಯಕ್ಷೆ ಸುಶೀಲಮ್ಮ ಗಣೇಶ್, ಉಪಾಧ್ಯಕ್ಷ ಎ.ಜೆ ಸ್ವಾಮಿ, ಪಿಡಿಒ ಮಂಜುನಾಥ್, ಕೊಪ್ಪ ಗ್ರಾ.ಪಂ ಅಧ್ಯಕ್ಷ ರೇಣುಕಾಸ್ವಾಮಿ, ಉಪಾಧ್ಯಕ್ಷೆ ಸಿಂಧು, ಪಿಡಿಒ ಕೆ.ವಿ ಸತೀಶ್, ಆವರ್ತಿ ಗ್ರಾ.ಪಂ ಅಧ್ಯಕ್ಷ ಶಿವು, ಉಪಾಧ್ಯಕ್ಷೆ ವಿಂಧ್ಯಶ್ರೀ, ಪಿಡಿಒ ಅಭಿ ಮಹಮ್ಮದ್, ದೊಡ್ಡಕಮರವಳ್ಳಿ ಗ್ರಾ.ಪಂ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷೆ ನೇತ್ರಾವತಿ, ಕಾರ್ಯದರ್ಶಿ ಗಣೇಶ್, ಎಲ್ಲಾ ಗ್ರಾ.ಪಂ ಸದಸ್ಯರು ಮತ್ತು ಸಿಬ್ಬಂದಿ,  ಮುಖಂಡರಾದ ಕೆ.ಪಿ ಚಂದ್ರಶೇಖರಯ್ಯ, ಮಲ್ಲಿಕಾರ್ಜುನ್, ಸೋಮಶೇಖರ್, ಮಲ್ಲೇಶ್, ಶ್ರೀಧರ್ ಮತ್ತಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top