
ಪಿರಿಯಾಪಟ್ಟಣ: ತಮ್ಮ ಮಗನ ಅದ್ದೂರಿ ಮದುವೆಗೆ ಕಡಿವಾಣ ಹಾಕಿ ಕೊರೊನಾ ಸಂಕಷ್ಠದ ಪರಿಸ್ಥಿತಿಯಲ್ಲಿ ಸರ್ಕಾರದ ನಿಯಮದಂತೆ ಸರಳ ವಿವಾಹ ನಡೆಸಿದ ತಾಲ್ಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಬಿ.ಜೆ ದೇವರಾಜು ಮದುವೆ ಖರ್ಚಿಗೆ ಬಳಸುತ್ತಿದ್ದ 2,05,001 (ಎರಡು ಲಕ್ಷದ ಐದು ಸಾವಿರದ ಒಂದು ರೂ) ಹಣದ ಚೆಕ್ ಅನ್ನು ಕೊರೊನಾ ಸೋಂಕಿತರಿಗೆ ಅಗತ್ಯವಿರುವ ಮೆಡಿಷನ್ ಖರೀದಿಸಲು ಶಾಸಕ ಕೆ.ಮಹದೇವ್ ಅವರ ಸಮ್ಮುಖ ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದರು. ಈ ವೇಳೆ ಶಾಸಕ ಕೆ.ಮಹದೇವ್ ಮಾತನಾಡಿ ಹಣವಿರುವ ಶ್ರೀಮಂತರೆಲ್ಲ ದಾನ ಧರ್ಮ ಮಾಡಲು ಮನಸ್ಸು ಮಾಡುವುದಿಲ್ಲ ಆ ಕೆಲಸ ಮಾಡುವವರನ್ನು ಗೌರವಿಸಬೇಕಿದೆ, ರಾಜ್ಯದಲ್ಲಿ ಈ ರೀತಿ ಮದುವೆಗೆಂದು ಕೂಡಿಟ್ಟಿದ್ದ ಹಣವನ್ನು ದಾನ ನೀಡಿದವರಲ್ಲಿ ಇದು ಎರಡನೇ ಪ್ರಕರಣವಾಗಿದ್ದು ಇಂತಹವರ ಸಂಖ್ಯೆ ಹೆಚ್ಚಳವಾಗಲಿ, ಬಿ.ಜೆ ದೇವರಾಜು ಅವರ ಸಮಾಜಮುಖಿ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದು ಆಶಿಸಿದರು.

ಜೆಡಿಎಸ್ ಮುಖಂಡ ಬಿ.ಜೆ ದೇವರಾಜು ಮಾತನಾಡಿ ಇಡೀ ವಿಶ್ವವೇ ಕೊರೊನಾ ಸೋಂಕಿನಿಂದ ತತ್ತರಿಸಿ ಸಾಕಷ್ಟು ಸಂಖ್ಯೆಯ ಸಾವು ನೋವಾಗಿ ಲಾಕ್ ಡೌನ್ ಜಾರಿ ಮಾಡಲಾಗಿದೆ, ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ ನೆರವಾಗುವ ನಿಟ್ಟಿನಲ್ಲಿ ನನ್ನ ಮಗ ಬಿ.ಡಿ ರತನ್ ಗೌಡ ಹಾಗೂ ಸೋನುಗೌಡ ಅವರ ವಿವಾಹವನ್ನು ಸರಳವಾಗಿ ನೆರವೇರಿಸಿ ಉಳಿಕೆ ಹಣವನ್ನು ತಾಲ್ಲೂಕು ಆಡಳಿತಕ್ಕೆ ನೀಡುವ ಮೂಲಕ ನನ್ನ ಕೈಲಾದ ಸಹಾಯ ಮಾಡಲಾಗಿದೆ ಎಂದರು.

ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ಟಿ, ಎಚ್ಒ ಡಾ.ಶರತ್ ಬಾಬು, ಬಿಇಓ ತಿಮ್ಮೇಗೌಡ, ತಾ.ಪಂ.ಮಾಜಿ ಸದಸ್ಯರಾದ ಎ.ಟಿ.ರಂಗಸ್ವಾಮಿ, ಸೋಮಶೇಖರ್, ಜೆಡಿಎಸ್ ಮುಖಂಡ ಅಣ್ಣಯ್ಯಶೆಟ್ಟಿ, ರತನ್ ಗೌಡ, ಸೋನಾಗೌಡ ಹಾಜರಿದ್ದರು.
