
ಕೊರೊನಾ ಸೋಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಶ್ರಮಕ್ಕೆ ಸಮುದಾಯದ ಸಹಕಾರ ಅತ್ಯಗತ್ಯ ಎಂದು ಶಾಸಕ ಕೆ.ಮಹದೇವ್ ಹೇಳಿದರು. ಜೂ.25 ರೊಳಗೆ ತಾಲ್ಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳನ್ನು ಕೊರೊನಾ ಮುಕ್ತ ಮಾಡುವ ನಿಟ್ಟಿನಲ್ಲಿ ಪಿಡಿಒ ಹಾಗೂ ಆಡಳಿತ ವರ್ಗ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಪ್ರತಿ ಹಳ್ಳಿಗಳಿಗೆ ಭೇಟಿ ಮನೆ ಮನೆ ಸರ್ವೆ ಕಾರ್ಯ ನಡೆಸುವ ಮೂಲಕ ಸೋಂಕಿತರು ಕಂಡು ಬಂದರೆ ಹೋಮ್ ಐಸೊಲೇಶನ್ ಮಾಡದೆ ಕೊವಿಡ್ ಕೇರ್ ಸೆಂಟರ್ ಗಳಿಗೆ ಸ್ಥಳಾಂತರಿಸುವ ಮೂಲಕ ಸೋಂಕು ಹೆಚ್ಚು ಹರಡದಂತೆ ನಿಗಾ ವಹಿಸುವಂತೆ ಸೂಚಿಸಿ ಪ್ರತಿಯೊಬ್ಬರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ತಾಳದೆ ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೋರಿದರು.

ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ನಿರ್ಗತಿಕರನ್ನು ಗುರುತಿಸಿ ಆಹಾರ ಕಿಟ್ ಗಳನ್ನು ವಿತರಿಸುವುದು ಹಾಗೂ ನರೇಗಾ ಯೋಜನೆಯಡಿ ಉದ್ಯೋಗಾವಕಾಶ ಕಲ್ಪಿಸಲು ಪಿಡಿಒ ಹಾಗೂ ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಂಡು ಕೊರೊನಾ ಸೋಂಕಿನ ಬಗ್ಗೆ ಹಳ್ಳಿ ಜನರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಿವು ಮೂಡಿಸುವಂತೆ ತಿಳಿಸಿದರು.

ತಹಸೀಲ್ದಾರ್ ಕೆ.ಚಂದ್ರಮೌಳಿ ಮಾತನಾಡಿ ತಾಲ್ಲೂಕನ್ನು ಕೊರೊನಾ ಮುಕ್ತ ಮಾಡುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಿವಿಧ ಇಲಾಖೆ ಸಹಕಾರದೊಂದಿಗೆ ಕೈಗೊಂಡಿದ್ದು ಪ್ರತಿಯೊಬ್ಬರು ಜಾಗೃತರಾಗಿರುವಂತೆ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದರೆ ಸಾರ್ವಜನಿಕರು ಭಯಪಡದೆ ಅಗತ್ಯ ಔಷಧಿ ಹಾಗೂ ಮಾತ್ರೆಗಳನ್ನು ಸೇವಿಸಬೇಕು, ಸಕ್ಕರೆ ಕಾಯಿಲೆ ಇರುವವರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅಂತವರನ್ನು ಗುರುತಿಸಿ ಅಗತ್ಯ ಔಷಧಿ ಮಾತ್ರೆ ನೀಡುವಂತೆ ತಿಳಿಸಿದರು.

ಈ ಸಂದರ್ಭ ತಾ.ಪಂ ಮಾಜಿ ಸದಸ್ಯ ಟಿ.ಈರಯ್ಯ, ಬಿಇಒ ವೈ.ಕೆ ತಿಮ್ಮೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಚೌತಿ ಗ್ರಾ.ಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ರವಿಚಂದ್ರ, ಕಿರನಲ್ಲಿ, ಮಾಲಂಗಿ, ಪಂಚವಳ್ಳಿ ಗ್ರಾ.ಪಂ ಆಡಳಿತ ವರ್ಗ, ಪಿಡಿಒ ಮತ್ತು ಸಿಬ್ಬಂದಿ ಹಾಜರಿದ್ದರು.