
ಪಿರಿಯಾಪಟ್ಟಣ: ಕೊರೊನಾ ಲಸಿಕೆ ಪಡೆಯಲು ಸರ್ಕಾರ ನಿಗದಿಪಡಿಸಿರುವ ವಯೋಮಾನದವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಶಾಸಕ ಕೆ.ಮಹದೇವ್ ಹೇಳಿದರು. ಪಟ್ಟಣದ ಪುರಸಭೆ ಕಚೇರಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರು ನಿರ್ಲಕ್ಷ್ಯ ಭಾವ ತಾಳದೆ ಕಡ್ಡಾಯ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು, ಆದ್ಯತೆ ಮೇರೆಗೆ ಹಂತ ಹಂತವಾಗಿ ಎಲ್ಲಾ ವರ್ಗದ ಜನರಿಗೆ ಲಸಿಕೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ ಲಾಕ್ ಡೌನ್ ಸಂದರ್ಭ ಪಟ್ಟಣ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ದಿನಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಸಾರ್ವಜನಿಕರು ಅನಗತ್ಯವಾಗಿ ಓಡಾಡದೆ ಕಟ್ಟುನಿಟ್ಟಾಗಿ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ಎ.ಟಿ ಪ್ರಸನ್ನ ಮಾತನಾಡಿ ಈಗಾಗಲೇ ಪಟ್ಟಣ ವ್ಯಾಪ್ತಿಯಲ್ಲಿ ಮನೆ ಮನೆ ಸರ್ವೆ ಕಾರ್ಯ ನಡೆಸಿ ಸೋಂಕಿನ ಲಕ್ಷಣ ಉಳ್ಳವರ ಮಾಹಿತಿ ಪಡೆದು ಅಗತ್ಯ ಮೆಡಿಸಿನ್ ಕಿಟ್ ಗಳನ್ನು ವಿತರಿಸಲಾಗಿದೆ, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವಿವಿಧ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ಪರಿಶ್ರಮಕ್ಕೆ ಸಾರ್ವಜನಿಕರು ಸ್ಪಂದಿಸುವಂತೆ ಕೋರಿದರು.
ಈ ಸಂದರ್ಭ ಪುರಸಭಾ ಸದಸ್ಯರಾದ ಪಿ.ಸಿ ಕೃಷ್ಣ, ಮಂಜುನಾಥ್, ಆರೋಗ್ಯ ನಿರೀಕ್ಷಕರಾದ ಪ್ರದೀಪ್, ಆದರ್ಶ್, ಸಮುದಾಯ ಸಂಘಟನಾಧಿಕಾರಿ ಶರ್ಮಿಳಾ, ಪರಿಸರ ಇಂಜಿನಿಯರ್ ವೈಶಾಲಿ, ವ್ಯವಸ್ಥಾಪಕ ರೇವಣ್ಣ, ಲೆಕ್ಕಾಧಿಕಾರಿ ಪ್ರದೀಪ್, ಜಯರಾಮ್, ಮಂಜು, ಸಾರ್ವಜನಿಕ ಆಸ್ಪತ್ರೆ ಮತ್ತು ಪುರಸಭೆ ಸಿಬ್ಬಂದಿ ಹಾಜರಿದ್ದರು.