ತಾಲ್ಲೂಕಿನ ಕಂಪಲಾಪುರ, ದೊಡ್ಡಬೇಲಾಳು, ಮಾಕೋಡು, ರಾವಂದೂರು ಹಾಗೂ ಹಂಡಿತವಳ್ಳಿ ಗ್ರಾ.ಪಂ ಗಳಿಗೆ ಭೇಟಿ ನೀಡಿ ಕೊರೊನಾ ನಿರ್ವಹಣೆ ಸಂಬಂಧ ಸಭೆ ನಡೆಸಿದರು 01/06/2021

ಪಿರಿಯಾಪಟ್ಟಣ: ಕೊರೊನಾ ಸೋಂಕು ತಡೆಗಟ್ಟಲು ತಳಮಟ್ಟದಿಂದ ಶ್ರಮಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೊಂಕು ತಡೆಗಟ್ಟಲು ಅನುಸರಿಸುತ್ತಿರುವ ಕ್ರಮಗಳ ಮಾಹಿತಿ ಪಡೆಯುವ ಉದ್ದೇಶದಿಂದ ಎಲ್ಲ ಗ್ರಾ.ಪಂ ಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಲಾಗುತ್ತಿದೆ, ಸೋಂಕು ತಡೆಗಟ್ಟಲು ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಜತೆ ಸ್ಥಳೀಯ ಜನಪ್ರತಿನಿಧಿಗಳ ಜವಾಬ್ದಾರಿ ಸಹ ಬಹಳ ಮುಖ್ಯವಾಗಿದೆ, ಕೊರೊನಾ ವೈರಸ್ ಬಗ್ಗೆ ನಾವು ಎಚ್ಚರಿಕೆ ವಹಿಸದೆ ಹೋದರೆ ಜೀವಕ್ಕೆ ಕುತ್ತು ಬರಲಿದೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು  ಸೋಂಕಿತರ ಮನೆ ಮನೆಗೆ ಭೇಟಿ ನೀಡಿ ಸರ್ವೆ ಕಾರ್ಯ ನಡೆಸುವ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಉತ್ತಮವಾಗಿ ಮಾಡುತ್ತಿರುವುದಾಗಿ ಶ್ಲಾಘಿಸಿದರು, ಲಾಕ್ ಡೌನ್ ಸಂದರ್ಭ ಬಡ ಕುಟುಂಬಗಳಿಗೆ ಆರ್ಥಿಕ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಗ್ರಾ.ಪಂ ಮುಖಾಂತರ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ನಡೆಸಲು ಅವಕಾಶ ನೀಡಿದ್ದು ಅವುಗಳ ಸದ್ಬಳಕೆ ಆಗಬೇಕಿದೆ ಎಂದರು.  

ತಹಸೀಲ್ದಾರ್ ಕೆ.ಚಂದ್ರಮೌಳಿ ಮಾತನಾಡಿ ಜೂನ್ ಅಂತ್ಯದ ವೇಳೆಗೆ ತಾಲ್ಲೂಕನ್ನು ಕೊರೊನಾ ಮುಕ್ತ  ಮಾಡಬೇಕೆನ್ನುವ ಗುರಿ ಹೊಂದಲಾಗಿದ್ದು ಆ ನಿಟ್ಟಿನಲ್ಲಿ ಎಲ್ಲಾ ಗ್ರಾ.ಪಂ ಗಳು ಕಾರ್ಯೋನ್ಮುಖರಾಗಬೇಕಿದೆ, ಜೂ.25 ರ ವೇಳೆಗೆ ಶೂನ್ಯ ಕೊರೊನಾ ಪ್ರಕರಣ ಹೊಂದಿರುವ ಗ್ರಾ.ಪಂ ಗಳಿಗೆ ಪುರಸ್ಕಾರದ ಜತೆ ತಲಾ ಇಪ್ಪತ್ತೈದು ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.

ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ವಿಲೇಜ್ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಗ್ರಾ.ಪಂ ಸದಸ್ಯರು ಅಧ್ಯಕ್ಷರಾಗಿದ್ದು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ, ತಮ್ಮ ಗ್ರಾಮಗಳಿಗೆ ಹೊರಗಿನಿಂದ ಬರುವವರ ಮೇಲೆ ನಿಗಾ ವಹಿಸಿ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡುವಂತೆ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಸೋಂಕಿನ ಲಕ್ಷಣ ಉಳ್ಳವರು ಹಾಗೂ ಅವರ ಪ್ರಾಥಮಿಕ ಸಂಪರ್ಕದಲ್ಲಿರುವವರು ಕಡ್ಡಾಯವಾಗಿ ಪರೀಕ್ಷೆಗೊಳಪಟ್ಟು ಚಿಕಿತ್ಸೆ ಪಡೆಯಬೇಕು, ಬರುವ ಶುಕ್ರವಾರದಿಂದ ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮದೊಂದಿಗೆ ಪ್ರತಿ ಹಳ್ಳಿಗಳಿಗೆ ವೈದ್ಯರ ತಂಡ ಭೇಟಿ ನೀಡಿ ಪರಿಶೀಲಿಸುತ್ತಾರೆ ಎಂದರು.

ಈ ಸಂದರ್ಭ ಪಿಡಿಒ ಗಳಾದ ಪರಮೇಶ್, ನಾಗಶೆಟ್ಟಿ, ರವಿಕುಮಾರ್, ಮಲ್ಲೇಶ್, ಗಣೇಶ್, ಎಲ್ಲಾ ಗ್ರಾ.ಪಂ ಆಡಳಿತ ವರ್ಗ ಮತ್ತು ಸಿಬ್ಬಂದಿ, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಮತ್ತು ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top