
ಕೊರೊನಾ ಮುಕ್ತವಾಗಿಸುವ ತಾಲ್ಲೂಕಿನ ಮೊದಲ ಗ್ರಾಮ ಪಂಚಾಯ್ತಿಗೆ ವೈಯುಕ್ತಿಕವಾಗಿ ಇಪ್ಪತ್ತೈದು ಸಾವಿರ ನಗದು ಬಹುಮಾನ ನೀಡಿ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಕೆ.ಮಹದೇವ್ ತಿಳಿಸಿದರು. ತಾಲ್ಲೂಕಿನ ವಿವಿಧೆಡೆಯ ಗ್ರಾ.ಪಂ ಗಳಿಗೆ ಭೇಟಿ ನೀಡಿ ಕೊರೊನಾ ನಿರ್ವಹಣೆ ಸಂಬಂಧ ಸಭೆ ನಡೆಸಿ ಅವರು ಮಾತನಾಡಿದರು, ಗ್ರಾಮಾಂತರ ಪ್ರದೇಶಗಳಲ್ಲಿ ಹರಡಿರುವ ಕೊರೊನಾ ಸೋಂಕು ತಡೆಗಟ್ಟಲು ಪಂಚಾಯ್ತಿ, ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟು ಶ್ರಮಿಸುತ್ತಿದ್ದು ಅವರಿಗೆ ಸಾರ್ವಜನಿಕರು ಸಹಕರಿಸಬೇಕು, ಅಧಿಕಾರಿ ಮತ್ತು ಸಿಬ್ಬಂದಿ ಸೋಂಕಿತರ ಮನೆಗೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ಪ್ರತಿನಿತ್ಯ ನಿಗಾವಹಿಸುವಂತೆ ಸೂಚಿಸಿ ಕೊರೊನಾ ಮುಕ್ತ ಗ್ರಾ.ಪಂ ಗೆ ಸರ್ಕಾರ ನೀಡುವ ಪುರಸ್ಕಾರದ ಜತೆಗೆ ವೈಯಕ್ತಿಕವಾಗಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಮಾತನಾಡಿ ಗ್ರಾಮಾಂತರ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಿಗೆ ಸೋಂಕು ದೃಢಪಡುತ್ತಿರುವ ಕಾರಣ ಯಾರಿಗೂ ಹೋಮ್ ಐಸೋಲೇಷನ್ ನಲ್ಲಿ ಅವಕಾಶ ನೀಡದೆ ಕೋವಿಡ್ ಸೆಂಟರ್ ಗೆ ದಾಖಲಿಸುವ ಮೂಲಕ ಅವರ ಆರೋಗ್ಯದ ಮೇಲೆ ನಿಗಾ ವಹಿಸಬೇಕು, ಗ್ರಾ.ಪಂ ಅನುದಾನದ ಹಣದಲ್ಲಿ ಸ್ಯಾನಿಟೈಸರ್ ಮಾಸ್ಕ್ ಖರೀದಿಸಿ ವಿತರಿಸಿ ಪ್ರತಿ ಹಳ್ಳಿಗಳಲ್ಲಿ ಸ್ಯಾನಿಟೈಸ್ ಮಾಡಿಸುವಂತೆ ಸೂಚಿಸಿದರು.
ತಹಸೀಲ್ದಾರ್ ಕೆ.ಚಂದ್ರಮೌಳಿ ಮಾತನಾಡಿ ಕೊರೊನಾ ಮುಕ್ತ ತಾಲ್ಲೂಕು ಮಾಡುವ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಶ್ರಮಿಸುತ್ತಿದ್ದು ಸಾರ್ವಜನಿಕರು ಸಹಕಾರ ನೀಡುವಂತೆ ಕೋರಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಶುಕ್ರವಾರದಂದು ವೈದ್ಯರ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು ಪ್ರತಿ ಹಳ್ಳಿಗಳಿಗೆ ವೈದ್ಯರ ತಂಡ ಆಗಮಿಸಿದಾಗ ಕಡ್ಡಾಯವಾಗಿ ಪರೀಕ್ಷೆಗೊಳಪಡುವಂತೆ ಸೂಚಿಸಿ ಖಾಸಗಿ ಕ್ಲಿನಿಕ್ ಗಳ ವೈದ್ಯರು ಸರ್ಕಾರದ ಮಾರ್ಗಸೂಚಿಯಂತೆ ಔಷಧಗಳನ್ನು ವಿತರಿಸುವಂತೆ ಎಚ್ಚರಿಕೆ ನೀಡಿದರು.
ಈ ಸಂದರ್ಭ ಜಿ.ಪಂ ಸದಸ್ಯ ಕೆ.ಎಸ್ ಮಂಜುನಾಥ್, ಮಾಜಿ ಸದಸ್ಯ ಶಿವಣ್ಣ, ಅತ್ತಿಗೋಡು ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಸರೋಜಮ್ಮ, ಪಿಡಿಒ ಮನು, ಹರದೂರು ಗ್ರಾ.ಪಂ ಅಧ್ಯಕ್ಷೆ ಗಿರಿಜಮ್ಮ, ಉಪಾಧ್ಯಕ್ಷೆ ಕಾವ್ಯಶ್ರೀ, ಪಿಡಿಒ ಮೋಹನ್ ಕುಮಾರ್, ಎಲ್ಲ ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.