
ಪಿರಿಯಾಪಟ್ಟಣ: ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡ ಸಂದರ್ಭ ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆಯುವಂತೆ ಶಾಸಕ ಕೆ.ಮಹದೇವ್ ಹೇಳಿದರು. ಪುರಸಭೆ ವತಿಯಿಂದ ಪಟ್ಟಣ ವ್ಯಾಪ್ತಿಯ ಸೋಂಕಿತರು ಹಾಗೂ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ನೀಡಲೆಂದು ಮೂರು ಲಕ್ಷ ವೆಚ್ಚದ ಎರಡು ಸಾವಿರ ಔಷಧಿ ಕಿಟ್ ಗಳನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿ ಅವರು ಮಾತನಾಡಿದರು, ಕೊರೊನಾ ಸೋಂಕಿನಿಂದಾಗಿ ಲಾಕ್ ಡೌನ್ ಜಾರಿಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ, ಸೇವಾ ಮನೋಭಾವವುಳ್ಳವರು ನಿರ್ಗತಿಕರ ನೆರವಿಗೆ ಧಾವಿ ಸುತ್ತಿರುವುದು ಶ್ಲಾಘನೀಯ, ಪುರಸಭೆ ವತಿಯಿಂದ ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಕಡುಬಡವರನ್ನು ಗುರುತಿಸಿ ಆಹಾರ ಕಿಟ್ ವಿತರಿಸುವಂತೆ ಸೂಚಿಸಿದರು.
ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಸ್ಥಳೀಯ ಆಡಳಿತಗಳು ಅವರಿಗೆ ಕೈಜೋಡಿಸುವ ನಿಟ್ಟಿನಲ್ಲಿ ಪುರಸಭೆ ವತಿಯಿಂದ ಔಷಧಿ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಸೋಂಕಿತರು ಹಾಗೂ ಅವರ ಪ್ರಾರ್ಥಮಿಕ ಸಂಪರ್ಕದವರಿಗೆ ಔಷಧಿ ಕಿಟ್ ವಿತರಣೆ ಜತೆಗೆ ಸಿಬ್ಬಂದಿಗಳು ಅವರ ಯೋಗಕ್ಷೇಮ ವಿಚಾರಿಸಿ ಆತ್ಮಸ್ಥೈರ್ಯ ತುಂಬುವಂತೆ ಕೋರಿದರು.
ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಪುರಸಭಾ ಮುಖ್ಯಾಧಿಕಾರಿ ಎ.ಟಿ ಪ್ರಸನ್ನ ಮಾತನಾಡಿದರು.
ಈ ಸಂದರ್ಭ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್ ವಿನೋದ್, ಸದಸ್ಯರಾದ ಪಿ.ಸಿ ಕೃಷ್ಣ, ನಿರಂಜನ್, ಪ್ರಕಾಶ್ ಸಿಂಗ್, ಮಂಜುನಾಥ್, ರವಿ, ಮಂಜುಳಾ, ರೇವತಿ, ನಾಮನಿರ್ದೇಶಿತ ಸದಸ್ಯರಾದ ನಳಿನಿ, ಸುದರ್ಶನ್, ಪ್ರಸಾದ್, ಶಿವರಾಂ, ಟಿಎಪಿಸಿಎಂಎಸ್ ನಿರ್ದೇಶಕ ಮುಕೇಶ್ ಕುಮಾರ್, ಮುಖಂಡರಾದ ಮುಶೀರ್ ಖಾನ್, ಉಮೇಶ್, ಸೈಯದ್ ಇಲಿಯಾಸ್, ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.