ತಾಲ್ಲೂಕಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತಾಲ್ಲೂಕು ಆಡಳಿತ ವತಿಯಿಂದ ಆಹಾರ ಕಿಟ್ ಹಾಗೂ ಸುರಕ್ಷಾ ಪರಿಕರಗಳನ್ನು ಶಾಸಕ ಕೆ.ಮಹದೇವ್ ವಿತರಿಸಿದರು. 08/06/2021

ಪಟ್ಟಣದ ಪ್ರವಾಸಿ ಮಂದಿರ ಬಳಿ ಆಹಾರ ಕಿಟ್ ಹಾಗೂ ಸುರಕ್ಷಾ ಪರಿಕರಗಳನ್ನು ವಿತರಿಸಿ ಶಾಸಕ ಕೆ.ಮಹದೇವ್ ಅವರು ಮಾತನಾಡಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಡೆಗಟ್ಟುವಲ್ಲಿ ತಳಮಟ್ಟದಿಂದ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕೆಲಸಕ್ಕೆ ಪ್ರತಿಯೊಬ್ಬರೂ ಗೌರವಿಸಬೇಕು, ಅವರ ಕೆಲಸಕ್ಕೆ ಅಗತ್ಯವಿರುವ ಸುರಕ್ಷತಾ ಪರಿಕರಗಳು ಹಾಗೂ ಆಹಾರ ಕಿಟ್ ಅನ್ನು ತಾಲ್ಲೂಕು ಆಡಳಿತ ವತಿಯಿಂದ ವಿತರಿಸುತ್ತಿದ್ದು ಮುಂದಿನ ದಿನಗಳಲ್ಲಿಯೂ ಇದೇ ರೀತಿ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಕೋರಿದರು.

ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಮಾತನಾಡಿ ಈಗಾಗಲೇ ತಾಲ್ಲೂಕಿನ ಎಲ್ಲೆಡೆ ಮನೆ ಮನೆ ಸರ್ವೆ ಕಾರ್ಯವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಯಶಸ್ವಿಯಾಗಿ ನಿಭಾಯಿಸಿ ಸೋಂಕಿನ ಲಕ್ಷಣ ಉಳ್ಳವರ ಮಾಹಿತಿ ಕಲೆ ಹಾಕಿದ್ದಾರೆ ಮುಂದಿನ ದಿನಗಳಲ್ಲಿ ವಿಶೇಷ ಚೇತನರಿಗೆ ಲಸಿಕೆ ಹಾಕಿಸುವ ಕಾರ್ಯವನ್ನು ಯಶಸ್ವಿಯಾಗಿ ಮುಗಿಸುವಂತೆ ತಿಳಿಸಿದರು.

ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಮಾತನಾಡಿ ದೇಶದ ರಕ್ಷಣೆಗಾಗಿ ಗಡಿಯಲ್ಲಿ ಯೋಧರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಹಾಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಶ್ರಮಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ, ತಾಲ್ಲೂಕಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲೆಗೆ ಮಾದರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸಂತಸಕರ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಭೇಟಿ ಮಾಡಿ ಸೋಂಕಿನ ಲಕ್ಷಣ ಉಳ್ಳವರನ್ನು ಗುರುತಿಸಿ ಅವರಿಗೆ ಸೂಕ್ತ ಔಷಧಿ ಚಿಕಿತ್ಸೆ ನೀಡಿದ್ದರಿಂದ ಸೋಂಕಿನ ಪ್ರಮಾಣ ತಡೆಯಲು ಸಹಕಾರಿಯಾಯಿತು, ಸೋಂಕಿನ ಲಕ್ಷಣ ಉಳ್ಳವರನ್ನು ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದಡಿ ತಮ್ಮ ಗ್ರಾಮಗಳಿಗೆ ಆಗಮಿಸಿದಾಗ ಕಡ್ಡಾಯ ತಪಾಸಣೆಗೊಳಪಡಿಸುವಂತೆ ಸೂಚಿಸಿದರು.

ಸಿಡಿಪಿಒ ಕುಮಾರ್ ಮಾತನಾಡಿ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಗಳೊಂದಿಗೆ ಸಮನ್ವಯತೆ ಯಿಂದ ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ಸಂದರ್ಭ ತುರ್ತು ಪರಿಸ್ಥಿತಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ, ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದೆ ಪ್ರತಿಯೊಬ್ಬರು ಜಾಗೃತರಾಗಿರುವಂತೆ ಕೋರಿದರು.

Leave a Comment

Your email address will not be published. Required fields are marked *

error: Content is protected !!
Scroll to Top