
ಪಿರಿಯಾಪಟ್ಟಣ: ಬೆಳೆ ವೈಫಲ್ಯದಿಂದ ಸಾಲ ಬಾಧೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ಐದು ಮಂದಿ ರೈತ ಕುಟುಂಬದವರಿಗೆ ಸರ್ಕಾರದಿಂದ ಮಂಜೂರಾದ ತಲಾ ರೂ.5 ಲಕ್ಷ ಪರಿಹಾರದ ಆದೇಶ ಮಂಜೂರಾತಿ ಪತ್ರವನ್ನು ಪಟ್ಟಣದ ಪ್ರವಾಸಿ ಮಂದಿರ ಬಳಿ ಶಾಸಕ ಕೆ.ಮಹದೇವ್ ವಿತರಿಸಿದರು.
ಕೃಷಿ ಇಲಾಖೆ ವತಿಯಿಂದ ನೀಡಿದ ಪರಿಹಾರದ ಆದೇಶ ಪತ್ರಗಳನ್ನು ವಿತರಿಸಿ ಶಾಸಕ ಕೆ.ಮಹದೇವ್ ರವರು ಮಾತನಾಡಿ ಬೆಳೆ ವೈಫಲ್ಯದಿಂದ ಮೃತಪಟ್ಟಿದ್ದ ತಾಲ್ಲೂಕಿನ ಐದು ಮಂದಿ ರೈತ ಕುಟುಂಬದವರು ಪರಿಹಾರಕ್ಕಾಗಿ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿಗಳು ಕೆಲ ತಾಂತ್ರಿಕ ಕಾರಣಗಳಿಂದ ಮೂರು ಬಾರಿ ತಿರಸ್ಕಾರಗೊಂಡಿದ್ದವು, ಇದರಿಂದ ರೈತ ಕುಟುಂಬಗಳಿಗೆ ನ್ಯಾಯ ದೊರಕದೆ ಅನ್ಯಾಯವಾಗುತ್ತಿರುವುದನ್ನು ಮನಗಂಡು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರೊಂದಿಗೆ ಚರ್ಚಿಸಿ ಅರ್ಜಿಗಳನ್ನು ಮರುಪರಿಶೀಲಿಸಿ ರೈತ ಕುಟುಂಬಕ್ಕೆ ಸಹಾಯ ಮಾಡುವಂತೆ ಕೋರಲಾಗಿತ್ತು, ನನ್ನ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅರ್ಜಿಗಳನ್ನು ಮರುಪರಿಶೀಲಿಸಿ ರೈತ ಕುಟುಂಬಗಳಿಗೆ ಸರ್ಕಾರದ ಪರಿಹಾರ ದೊರಕುವಂತೆ ಮಾಡಿದ್ದಾರೆ ಅವರಿಗೆ ತಾಲ್ಲೂಕಿನ ಜನತೆ ಪರವಾಗಿ ಧನ್ಯವಾದ ತಿಳಿಸಿ ವಿವಿಧ ಇಲಾಖೆಗಳ ಮೂಲಕ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯಾವುದೇ ಸವಲತ್ತುಗಳು ದೊರೆತರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಈ ವೇಳೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಚಪ್ಪರದಹಳ್ಳಿ ಗ್ರಾಮದ ಸಿ.ಆರ್ ಆದರ್ಶ, ಬೆಟ್ಟದಪುರ ಗ್ರಾಮದ ರಘು, ಸುರೇಶ್, ಅಡಗೂರು ಗ್ರಾಮದ ಕಿರಣ್ ಕುಮಾರ್, ನಾಗನಹಳ್ಳಿ ಪಾಳ್ಯದ ದಿವಾಕರ್ ಕುಟುಂಬದವರಿಗೆ ಪರಿಹಾರದ ಆದೇಶ ಪತ್ರ ವಿತರಿಸಲಾಯಿತು.
ಈ ಸಂದರ್ಭ ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ತಹಸೀಲ್ದಾರ್ ಕೆ.ಚಂದ್ರಮೌಳಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಸಿಡಿಪಿಒ ಕುಮಾರ್, ಆರೋಗ್ಯ ಇಲಾಖೆ ಹಿರಿಯ ನಿರೀಕ್ಷಣಾಧಿಕಾರಿ ಕೆ.ಆರ್ ಪ್ರಕಾಶ್, ತಾ.ಪಂ ಮಾಜಿ ಸದಸ್ಯ ಎ.ಟಿ ರಂಗಸ್ವಾಮಿ ಹಾಜರಿದ್ದರು.