
ಎರಡನೇ ಕೊರೋನ ಅಲೆಯಿಂದ ನಗರ ಪ್ರದೇಶದ ರೀತಿಯಲ್ಲಿಯೇ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಇದನ್ನು ನಿಯಂತ್ರಣಕ್ಕೆ ತರಲು ಸ್ಥಳೀಯ ಇಲಾಖೆಯ ಅಧಿಕಾರಿಗಳ ಪರಿಶ್ರಮ ಅತಿಮುಖ್ಯ ಎಂದು ಶಾಸಕ ಕೆ ಮಹದೇವ್ ತಿಳಿಸಿದರು. ತಾಲೂಕಿನಲ್ಲಿ ಪ್ರತಿದಿನ 100 ಸೋಂಕಿತರ ಪ್ರಕರಣಗಳು ದಾಖಲಾಗುತ್ತಿವೆ ಆದ್ದರಿಂದ ಸ್ಥಳೀಯ ಅಧಿಕಾರಿಗಳು ಕೊರೋನ ನಿಯಂತ್ರಿಸಲು ಶ್ರಮ ವಹಿಸಬೇಕು ಎಂದು ಸೂಚಿಸಿದರು. ಈಗಾಗಲೇ ತಾಲೂಕಿನಲ್ಲಿ ನಡೆಯುತ್ತಿರುವ ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದಿಂದ ಸೋಂಕಿತರ ಪತ್ತೆಗೆ ಹಾಗೂ ಸ್ಥಳದಲ್ಲೇ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿ ತಾಲೂಕನ್ನು ಕೊರೋನ ಮುಕ್ತ ಮಾಡಲು ಹೋರಾಡಬೇಕು ಎಂದರು. ಸ್ಥಳೀಯ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಗ್ರಾಮಗಳ ವ್ಯಾಪ್ತಿಯಲ್ಲಿ ಅತಿ ಕಡು ಬಡವರು ಕೂಲಿ ಕಾರ್ಮಿಕರಿಗೆ ಪಂಚಾಯಿತಿ ಅನುದಾನವನ್ನು ಬಳಕೆ ಮಾಡಿ ಅವರಿಗೆ ಆಹಾರ ಕಿಟ್ ವಿತರಿಸುವಂತೆ ಸೂಚಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್, ತಹಸಿಲ್ದಾರ್ ಕೆ ಚಂದ್ರಮೌಳಿ ಮತ್ತು ಆರೋಗ್ಯಾಧಿಕಾರಿ ಶರತ್ ಬಾಬು ಮಾತನಾಡಿದರು