ತಾಲ್ಲೂಕಿನ ವಿವಿಧೆಡೆ ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಅರ್ಚಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ 180 ಕ್ಕೂ ಹೆಚ್ಚು ಮಂದಿಗೆ ಮುಜರಾಯಿ ಇಲಾಖೆ ವತಿಯಿಂದ ತಾಲ್ಲೂಕು ಆಡಳಿತದ ಪರವಾಗಿ ಶಾಸಕ ಕೆ.ಮಹದೇವ್ ಅವರು ಆಹಾರದ ಕಿಟ್ ಗಳನ್ನು ವಿತರಿಸಿದರು.
ಈ ವೇಳೆ ಶಾಸಕ ಕೆ.ಮಹದೇವ್ ರವರು ಮಾತನಾಡಿ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಅರ್ಚಕ ಸಮುದಾಯದವರ ನೆರವಿಗೆ ಧಾವಿಸಲು ಮುಜರಾಯಿ ಇಲಾಖೆ ವತಿಯಿಂದ ಈಗಾಗಲೇ 3 ಸಾವಿರ ಪ್ರೋತ್ಸಾಹ ಧನ ಬಿಡುಗಡೆ ಮಾಡಿದ್ದು ಕಳೆದ ವರ್ಷದಂತೆಯೇ ಈ ವರ್ಷವೂ ಸಹ ಆಹಾರ ಕಿಟ್ ಗಳನ್ನು ವಿತರಿಸಲಾಗುತ್ತಿದೆ, ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹೆಚ್ಚು ಹರಡುತ್ತಿರುವುದರಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸುವಂತೆ ಕೋರಿದರು.
ತಹಸೀಲ್ದಾರ್ ಕೆ.ಚಂದ್ರಮೌಳಿ ರವರು ಮಾತನಾಡಿ ಲಾಕ್ ಡೌನ್ ಇಂದ ಸಂಕಷ್ಟಕ್ಕೊಳಗಾಗಿರುವ ಅರ್ಚಕ ಸಮುದಾಯದವರ ನೆರವಿಗೆ ಧಾವಿಸುವ ಉದ್ದೇಶದಿಂದ ತಾಲ್ಲೂಕಿನಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ ‘ಸಿ’ ಗ್ರೇಡ್ ದೇವಾಲಯಗಳಲ್ಲಿನ ಅರ್ಚಕರಿಗೆ ಆಹಾರ ಕಿಟ್ ಅನ್ನು ಸರ್ಕಾರದ ಆದೇಶದಂತೆ ವಿತರಿಸುತ್ತಿದ್ದು ಪ್ರತಿಯೊಬ್ಬರೂ ಪಂಚಸೂತ್ರಗಳನ್ನು ಕಡ್ಡಾಯ ಪಾಲನೆ ಮಾಡುವ ಮೂಲಕ ಕೊರೊನಾ ಸೋಂಕು ತಡೆಗಟ್ಟಬೇಕೆಂದು ಕೋರಿದರು.
ಈ ಸಂದರ್ಭ ಶಿರಸ್ತೇದಾರ್ ಟ್ರಿಜಾ, ಉಪ ತಹಸೀಲ್ದಾರ್ ಎನ್.ಕೆ ಪ್ರದೀಪ್, ಗ್ರಾಮ ಲೆಕ್ಕಿಗ ನವೀನ್, ತಾಲ್ಲೂಕು ಆಡಳಿತ ಸಿಬ್ಬಂದಿ ಶೇಖರ್, ಬೋಜಪ್ಪ ಮತ್ತಿತರರಿದ್ದರು.