
ಪಿರಿಯಾಪಟ್ಟಣ: ತಾಲ್ಲೂಕಿನ ಕಿತ್ತೂರು ಬಳಿಯ ಪೂಜರಯ್ಯನ ಕೊಪ್ಪಲು ಗ್ರಾಮದಲ್ಲಿ ನೂತನ ಪಡಿತರ ಉಪ ಕೇಂದ್ರ ಹಾಗೂ ಶುದ್ಧ ಕುಡಿಯುವ ನೀರು ಘಟಕವನ್ನು ಶಾಸಕ ಕೆ.ಮಹದೇವ್ ಅವರು ಉದ್ಘಾಟಿಸಿದರು.
ಈ ವೇಳೆ ಶಾಸಕ ಕೆ.ಮಹದೇವ್ ಅವರು ಮಾತನಾಡಿ ತಾಲ್ಲೂಕಿನಾದ್ಯಂತ ಪಡಿತರ ಪಡೆಯಲು ದೂರದ ಊರುಗಳಿಗೆ ಹೋಗುತ್ತಿರುವ ಸ್ಥಳಗಳನ್ನು ಗುರುತಿಸಿ ಸ್ಥಳೀಯವಾಗಿ ಉಪ ಕೇಂದ್ರಗಳನ್ನು ತೆರೆಯುವಂತೆ ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಅವರಿಗೆ ಸೂಚಿಸಿದ್ದು ಅದರಂತೆ ಹಂತಹಂತವಾಗಿ ತಾಲ್ಲೂಕಿನಾದ್ಯಂತ ಪಡಿತರ ಉಪ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ, ಇದರಿಂದ ವಯಸ್ಸಾದವರು ಮಹಿಳೆಯರು ಅಂಗವಿಕಲರು ಪಡಿತರ ಪಡೆಯಲು ಸಹಕಾರಿಯಾಗಿದೆ ಎಂದರು.
ಗ್ರಾಮಾಂತರ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ದೊರಕಿಸಿಕೊಡುವ ಉದ್ದೇಶದಿಂದ ಅಗತ್ಯಕ್ಕನುಸಾರವಾಗಿ ನೂತನ ಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಲಾಗಿದ್ದು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು, ಚುನಾವಣೆ ಸಂದರ್ಭ ನೀಡಿದ ಆಶ್ವಾಸನೆಗಳನ್ನು ಹಂತಹಂತವಾಗಿ ಈಡೇರಿಸುತ್ತಿದ್ದು ತಾಲ್ಲೂಕಿನ ಜನತೆಯ ಸಹಕಾರ ಕೋರಿದರು.

ಇದೇ ವೇಳೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗೆ ತಮ್ಮ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಸರ್ಕಾರದ ನಿಯಮಾನುಸಾರ ಕಡ್ಡಾಯ ಕೊರೊನಾ ಲಸಿಕೆ ನೀಡುವಂತೆ ಸೂಚಿಸಿದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಮಾತನಾಡಿ ಗ್ರಾಮಾಂತರ ಪ್ರದೇಶದ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಿ ತಾಲ್ಲೂಕು ಕೊರಿನಾ ಮುಕ್ತವಾಗಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಕೋರಿದರು.

ಈ ವೇಳೆ ಜಿ.ಪಂ ಮಾಜಿ ಸದಸ್ಯ ಕೆ.ಎಸ್ ಮಂಜುನಾಥ್, ಜೆಡಿಎಸ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಗ್ರಾ.ಪಂ ಸದಸ್ಯ ದಿನೇಶ್, ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಭೂಸೇನಾ ನಿಗಮದ ಸಿಬ್ಬಂದಿ ವಿಜಯ್, ಮುಖಂಡರಾದ ಅಶ್ವತ್ಥ್, ಮಹದೇವಶೆಟ್ಟಿ ಸೇರಿದಂತೆ ಸ್ಥಳಿಯ ಗ್ರಾ.ಪಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಾಜರಿದ್ದರು.