
ಸಮೀಪದ ಕೆಸುವಿನಕೆರೆ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿ ದೊಡ್ಡ ಮಟ್ಟದ ಸ್ಫೋಟಕ ಸಿಡಿಸುತ್ತಿರುವ ಬಗ್ಗೆ ಗ್ರಾಮಸ್ಥರು ಮಾಡಿದ ಆರೋಪ ಮತ್ತು ಗಣಿಗಾರಿಕೆಯಿಂದ ಶಾಸಕರು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಕೆ.ಮಹದೇವ್ ಸೇರಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ಮೇ 31 ರಂದು ಕ್ವಾರಿಯಲ್ಲಿ ನಡೆಸಿದ ದೊಡ್ಡಮಟ್ಟದ ಸ್ಫೋಟದಿಂದ ಅಕ್ಕಪಕ್ಕದ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕ್ರಮ ಕೈಗೊಳ್ಳುವಂತೆ ಜೂ.2 ರಂದು ತಹಸೀಲ್ದಾರ್ ರವರಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಒಟ್ಟಾಗಿ ಸೇರಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಕೆ.ಚಂದ್ರಮೌಳಿ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕವಾಗಿ ಕಲ್ಲು ಗಣಿಗಾರಿಕೆಯನ್ನು ಬಂದ್ ಮಾಡಲು ಸೂಚಿಸಿದರು. 20 ದಿನಗಳ ನಂತರ ಕಲ್ಲು ಗಣಿಗಾರಿಕೆ ಚಟುವಟಿಕೆಗಳು ಮತ್ತೆ ಆರಂಭವಾಗಿದೆ.
ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಸ್ಥಳ ಕೂಡ ಒತ್ತುವರಿಯಾಗಿದೆ, ನಿಗದಿಪಡಿಸಿದ ಸ್ಥಳಕ್ಕಿಂತ ಹೆಚ್ಚುವರಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಗಣಿಗಾರಿಕೆ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಇದರಿಂದ ಅಂತರ್ಜಲ ಕುಸಿಯುತ್ತಿದ್ದು ಸುತ್ತಮುತ್ತಲಿನ ಕೆರೆ ಕಟ್ಟೆಗಳು ಬರಿದಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದರು. ಕೂಡಲೇ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳವನ್ನು ಸರ್ವೆ ಮಾಡಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶಾಸಕ ಕೆ.ಮಹದೇವ್ ಪತ್ರಿಕೆಯೊಂದಿಗೆ ಮಾತನಾಡಿ ಇಲ್ಲಿನ ಕಲ್ಲು ಗಣಿಗಾರಿಕೆ ಸ್ಥಳದಿಂದ ನನಗೆ ಬೇನಾಮಿ ಹಣ ಬರುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ ಅಂಥವರು ಸಾಕ್ಷಿ ಸಮೇತ ಸಾಬೀತು ಪಡಿಸಿ ಮಾತನಾಡಬೇಕು ಅದನ್ನು ಬಿಟ್ಟು ಇಲ್ಲಸಲ್ಲದ ಅಪಪ್ರಚಾರ ಮಾಡಬಾರದು ಎಂದು ತಾಕೀತು ಮಾಡಿದರು . ತಾಲ್ಲೂಕಿನಲ್ಲಿ ಇರುವಂಥ ಎಲ್ಲ ಗಣಿಗಾರಿಕೆ ಮಾಲೀಕರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ರೈತರಿಗೆ ಹಾಗೂ ಸ್ಥಳೀಯರಿಗೆ ತೊಂದರೆಯಾಗದಂತೆ ಗಣಿಗಾರಿಕೆ ಚಟುವಟಿಕೆಗಳನ್ನು ಮಾಡಬೇಕೆಂದು ಸೂಚಿಸಲಾಗುವುದು ಅಲ್ಲದೆ ಈ ಗಣಿಗಾರಿಕೆಯಲ್ಲಿ ನಿಗದಿತ ಸ್ಥಳ ಬಿಟ್ಟು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸ್ಥಳದ ಪರಿಶೀಲನೆಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಡ್ರೋನ್ ಮೂಲಕ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಜಾಗವನ್ನು ಸರ್ವೆ ಮಾಡಿಸಲು ಆದೇಶಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಸುವಿನಕಾವಲು ಗ್ರಾಮದಲ್ಲಿ ನಡೆಯುತ್ತಿರುವ ಕ್ರಷರ್ಗೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ತಹಸೀಲ್ದಾರ್ ಕೆ.ಚಂದ್ರಮೌಳಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್, ಸಿ ಪಿ ಐ ಬಿ.ಆರ್ ಪ್ರದೀಪ್, ಉಪ ತಹಸೀಲ್ದಾರ್ ಎನ್.ಕೆ ಪ್ರದೀಪ್, ಪಿಡಿಒ ನಾರಾಯಣ, ಗ್ರಾಮ ಲೆಕ್ಕಾಧಿಕಾರಿ ರಾಜೇಶ್ ಸೇರಿದಂತೆ ಕಂದಾಯ ಪೋಲಿಸ್ ಮತ್ತು ಪಂಚಾಯಿತಿ ರಾಜ್ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮದ ಮುಖಂಡರು ಇದ್ದರು.