
ಪಿರಿಯಾಪಟ್ಟಣ: ಪಟ್ಟಣದ ಹರವೆ ಮಲ್ಲರಾಜಪಟ್ಟಣದ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಟ್ಟದಪುರ ಹಾಗೂ ಪಿರಿಯಾಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ನೀಡುವ ಟ್ಯಾಬ್ಲೆಟ್ ನ ಸಾಂಕೇತಿಕ ವಿತರಣೆ ಹಾಗೂ ಸ್ಮಾರ್ಟ್ ಕ್ಲಾಸ್ ಗೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಕೆ.ಮಹದೇವ್ ಅವರು ಸರ್ಕಾರಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಹಲವು ಸವಲತ್ತುಗಳನ್ನು ವಿತರಿಸುತ್ತಿದ್ದು ಅವುಗಳ ಸದ್ಬಳಕೆ ಆಗಬೇಕಿದೆ, ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸರ್ಕಾರಿ ಕಾಲೇಜುಗಳಲ್ಲಿಯೂ ಸ್ಮಾರ್ಟ್ ಕ್ಲಾಸ್ ಆರಂಭ ಮಾಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುತ್ತಿದೆ, ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಯನ್ನು ಬಿಜೆಪಿ ಸರ್ಕಾರವು ಮುಂದುವರೆಸಿರುವುದು ಶ್ಲಾಘನೀಯ, ಈಚಿನ ದಿನಗಳಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳು ಖಾಸಗಿ ಶಾಲಾ ಕಾಲೇಜುಗಳಿಗಿಂತ ಉತ್ತಮ ಫಲಿತಾಂಶ ಪಡೆಯುತ್ತಿರುವುದು ಸಂತಸದ ವಿಷಯ ಎಂದರು.

ಬೆಟ್ಟದಪುರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪೂನಾಡಹಳ್ಳಿ ರಘು ರವರು ಮಾತನಾಡಿ ತಂತ್ರಜ್ಞಾನ ಮುಂದುವರೆದಂತೆ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುವ ಉದ್ದೇಶದಿಂದ ಸರ್ಕಾರ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟ್ ಕ್ಲಾಸ್ ಆರಂಭ ಹಾಗೂ ಟ್ಯಾಬ್ಲೆಟ್ ಗಳನ್ನು ವಿತರಿಸುತ್ತಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಪಿರಿಯಾಪಟ್ಟಣ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಡಿ ದೇವರಾಜ್ ಮಾತನಾಡಿ ಪ್ರತಿ ವಿದ್ಯಾರ್ಥಿಗೂ ಇಂಟರ್ನೆಟ್ ಸೌಲಭ್ಯದ ಮೂಲಕ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ನೂತನ ಯೋಜನೆ ಆರಂಭಿಸಿದೆ, ಕಾಲೇಜು ಅಭಿವೃದ್ಧಿಗೂ ಸಹ ಶಾಸಕರು ಹಲವು ಸವಲತ್ತುಗಳನ್ನು ಒದಗಿಸಿಕೊಟ್ಟ ಹಿನ್ನೆಲೆ ಪ್ರತಿವರ್ಷ ವಿದ್ಯಾರ್ಥಿಗಳ ನೋಂದಣಿಯಲ್ಲಿ ಹೆಚ್ಚಳ ಕಂಡು ನುರಿತ ಉಪನ್ಯಾಸಕರ ಉತ್ತಮ ಪಾಠ ಪ್ರವಚನದ ಮೂಲಕ ಫಲಿತಾಂಶವು ಸಹ ಏರಿಕೆಯಾಗಿದೆ ಎಂದರು.
ಈ ಸಂದರ್ಭ ಸಹಾಯಕ ಪ್ರಾಧ್ಯಾಪಕರಾದ ಎಂ.ಎನ್ ಉದಯಕುಮಾರ್ ಹಾಗೂ ಪ್ರಸಾದ್ ಇದ್ದರು.