
ಪಿರಿಯಾಪಟ್ಟಣ: ಪಟ್ಟಣದ ಹರವೆ ಮಲ್ಲರಾಜಪಟ್ಟಣದ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ನೀಡುತ್ತಿರುವ ಕೊರೊನಾ ಲಸಿಕಾ ಅಭಿಯಾನಕ್ಕೆ ಶಾಸಕ ಕೆ.ಮಹದೇವ್ ಅವರು ಚಾಲನೆ ನೀಡಿದರು.
ಈ ವೇಳೆ ಶಾಸಕ ಕೆ.ಮಹದೇವ್ ಮಾತನಾಡಿ ಕೊರೊನಾ ಸೋಂಕು ತಡೆಗಟ್ಟುವುದು ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಉದಾಸೀನತೆ ಮಾಡದೇ ಸರ್ಕಾರದ ನಿಯಮಾನುಸಾರ ಪ್ರತಿಯೊಬ್ಬರೂ ಕಡ್ಡಾಯ ಲಸಿಕೆ ಪಡೆಯಬೇಕು, ಲಸಿಕೆ ಅಭಿಯಾನಕ್ಕೆ ಪ್ರಾರಂಭಿಕ ಹಂತದಲ್ಲಿ ಕೆಲವರ ಅಪಪ್ರಚಾರದಿಂದಾಗಿ ಹಿನ್ನಡೆ ಉಂಟಾಗಿ ತದನಂತರ ಎಲ್ಲರೂ ಒಮ್ಮೆಲೆ ಲಸಿಕೆ ಪಡೆಯಲು ಬರುತ್ತಿರುವುದರಿಂದ ಅಗತ್ಯಾನುಸಾರ ಪೂರೈಸಲು ಕೊರತೆ ಉಂಟಾಗಿದೆ, ಸೋಂಕಿನ ಮೂರನೇ ಅಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುತ್ತಿದ್ದು ಪ್ರತಿಯೊಬ್ಬರು ಕಡ್ಡಾಯ ಪಡೆದು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಯುವ ಜನತೆ ಸಹಕಾರ ನೀಡಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಜನಸಾಮಾನ್ಯರಿಗೆ ನಿಯಮಾನುಸಾರ ನೀಡುತ್ತಿದ್ದ ಲಸಿಕೆಯನ್ನು ಸರ್ಕಾರದ ಆದೇಶದಂತೆ ಕಾಲೇಜು ವಿದ್ಯಾರ್ಥಿಗಳಿಗೆ ನೀಡುತ್ತಿದ್ದು ಲಸಿಕೆ ಪಡೆದ ವಿದ್ಯಾರ್ಥಿಗಳು ತಮ್ಮ ಕುಟುಂಬದವರು ಹಾಗೂ ತಮ್ಮ ಗ್ರಾಮಗಳಲ್ಲಿ ಲಸಿಕೆ ಪಡೆಯದೇ ಇರುವವರಿಗೆ ಅರಿವು ಮೂಡಿಸುವ ಮೂಲಕ ಸೋಂಕು ಮುಕ್ತ ಮಾಡುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಕೋರಿದರು.
ಈ ವೇಳೆ ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಡಿ ದೇವರಾಜ್, ಸಿಡಿಸಿ ಸದಸ್ಯ ರಘುನಾಥ್, ರಾಜು, ಪುರಸಭಾ ಸದಸ್ಯ ಪ್ರಕಾಶ್ ಸಿಂಗ್, ಲಸಿಕಾ ಅಭಿಯಾನದ ನೋಡಲ್ ಅಧಿಕಾರಿ ಜಯಂತಿ, ಉಪನ್ಯಾಸಕರಾದ ಚೈತ್ರಾ, ಪ್ರಸಾದ್, ನಗ್ಮಾಸೋನಾ, ವಿಶ್ವನಾಥ, ರಾಜಗೋಪಾಲ್, ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪೂನಾಡಹಳ್ಳಿ ರಘು, ಉಪನ್ಯಾಸಕರಾದ ಜಗದೀಶ್, ಉದಯಕುಮಾರ್, ನಫೀಸ್ ಉಲ್ಲಾಖಾನ್, ಹಿರಿಯ ಆರೋಗ್ಯ ನಿರೀಕ್ಷಕರಾದ ರಮೇಶ್, ಅಜರಾಬಿ, ಮಹಿಳಾ ಆರೋಗ್ಯ ಸಹಾಯಕಿಯರಾದ ಪುಷ್ಪಲತಾ, ಗೀತಾ, ದೇವಕಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು