ಪಿರಿಯಾಪಟ್ಟಣ: ಪಟ್ಟಣದ ಪುರಸಭೆ ವತಿಯಿಂದ ಪೌರ ಕಾರ್ಮಿಕರು ಹಾಗೂ ನೀರುಗಂಟಿಗಳಿಗೆ ಆಹಾರ ಕಿಟ್ ಅನ್ನು MLA K.Mahadev ಅವರು ವಿತರಿಸಿದರು. 29/06/2021

ಈ ವೇಳೆ ಶಾಸಕ ಕೆ.ಮಹದೇವ್ ರವರು ಮಾತನಾಡಿ ಲಾಕ್ ಡೌನ್ ಸಂದರ್ಭ ಸಂಕಷ್ಟಕ್ಕೊಳಗಾಗಿರುವ ಅಸಂಘಟಿತ ಕಾರ್ಮಿಕ ವಲಯಗಳಿಗೆ ಕೈಲಾದ ಸಹಾಯ ಮಾಡುವ ನಿಟ್ಟಿನಲ್ಲಿ ಆಹಾರ ಕಿಟ್ ವಿತರಿಸಲಾಗುತ್ತಿದೆ, ಈಗಾಗಲೇ ಪುರಸಭೆ ವತಿಯಿಂದ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ, ವಿರೋಧಿಗಳು ಟೀಕೆ ಮಾಡುತ್ತಾರೆಂದು ನಮ್ಮ ಒಳ್ಳೆಯ ಕೆಲಸಗಳನ್ನು ನಿಲ್ಲಿಸಲಾಗುವುದಿಲ್ಲ, ಎಲ್ಲರನ್ನು ಮೆಚ್ಚಿಸಲು ಮತ್ತು ಅವರ ಸಮಸ್ಯೆ ಒಮ್ಮೆಲೆ ಬಗೆಹರಿಸಲು ಯಾರಿಂದಲು ಸಾಧ್ಯವಿಲ್ಲ, ನಮ್ಮ ಕೈಲಾದ ಕೆಲಸಗಳಿಗೆ ಆದ್ಯತೆ ನೀಡಿ  ಸಮಸ್ಯೆ ಪರಿಹರಿಸಲಾಗುತ್ತಿದೆ, ಈ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭ ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಗೆ ಕೊರತೆ ಉಂಟಾಗದಂತೆ ಕರ್ತವ್ಯ ನಿರ್ವಹಿಸಿದ್ದು ಶಾಸಕನಾಗಿಯೂ ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದರು.

ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ ಶಾಸಕರ ಸೂಚನೆಯಂತೆ ಸರ್ಕಾರ ಗುರ್ತಿಸಿರುವ ಅಸಂಘಟಿತ ವಿವಿಧ ವರ್ಗಗಳ ಕಾರ್ಮಿಕರಿಗೆ ಪುರಸಭೆ ಸದಸ್ಯರ ಎಲ್ಲರ ಸಹಕಾರದಿಂದ ಆಹಾರ ಕಿಟ್ ವಿತರಿಸಲಾಗಿದೆ, ಕಿಟ್ ವಿತರಣೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿರುವುದಾಗಿ ತಿಳಿಸಿದರು.

ಪುರಸಭಾ ಮುಖ್ಯಾಧಿಕಾರಿ ಎ.ಟಿ ಪ್ರಸನ್ನ ಮಾತನಾಡಿ ಪಟ್ಟಣದಲ್ಲಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ಶ್ರಮಿಸುತ್ತಿದ್ದು ಸಮುದಾಯದ ಸಹಕಾರ ಅಗತ್ಯವಿದೆ ಎಂದರು.

ಇದೇ ವೇಳೆ ಈಚೆಗೆ ನಿಧನರಾದ ಪುರಸಭಾ ನಾಮನಿರ್ದೇಶಿತ ಸದಸ್ಯ ಸುದರ್ಶನ್, ಪೌರಕಾರ್ಮಿಕ ಮುರುಗೇಶ್, ವಾಟರ್ ಮೆನ್ ಎಜಾಜ್, ದಸಂಸ ಮುಖಂಡ ಅಣ್ಣಯ್ಯ, ಪತ್ರಿಕಾ ವಿತರಕ ಅರ್ಜುನ್ ಅವರಿಗೆ ಸಂತಾಪ ಸೂಚಿಸಿ ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ದೊರೆಯುವ ಅನುದಾನದ ಚೆಕ್ ವಿತರಿಸಲಾಯಿತು, ಡಿ ಗ್ರೂಪ್ ನೌಕರ ರಾಜು ಮಾತನಾಡಿದರು. 

ಈ ಸಂದರ್ಭ ಪುರಸಭಾ ಸದಸ್ಯರಾದ ಪಿ.ಸಿ ಕೃಷ್ಣ, ಮಹೇಶ್, ನಾಮನಿರ್ದೇಶಿತ ಸದಸ್ಯರಾದ ನಳಿನಿ, ಲೀಲಾವತಿ, ಶಿವರಾಂ, ಮುಖಂಡರಾದ ಸೈಯದ್ ಇಲಿಯಾಸ್, ಮುಶೀರ್ ಖಾನ್, ಕಿರಿಯ ಅಭಿಯಂತರರಾದ ಸದಾಶಿವಪ್ಪ, ವನಿತಾ, ಪರಿಸರ ಅಭಿಯಂತರೆ ವೈಶಾಲಿ, ಸಮುದಾಯ ಸಂಘಟನಾಧಿಕಾರಿ ಶರ್ಮಿಳಾ, ವ್ಯವಸ್ಥಾಪಕ ರೇವಣ್ಣ, ಆರೋಗ್ಯ ನಿರೀಕ್ಷಕರಾದ ಆದರ್ಶ್, ಪ್ರದೀಪ್, ಕರವಸೂಲಿಗಾರರಾದ ಕುಮಾರ್, ರಘು ಮತ್ತಿತರರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top