
ಪಿರಿಯಾಪಟ್ಟಣ: ಪಟ್ಟಣದ ಪ್ರವಾಸಿಮಂದಿರ ಬಳಿ ಕಾರ್ಮಿಕ ಇಲಾಖೆ ವತಿಯಿಂದ ಅಂಗನವಾಡಿ ಸಹಾಯಕಿಯರು ಮತ್ತು ಅಂಗವಿಕಲರಿಗೆ ನೀಡಲಾದ ಆಹಾರ ಕಿಟ್ ಗಳನ್ನು ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ವಿತರಿಸಿದರು. ಈ ವೇಳೆ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮಾತನಾಡಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹತೋಟಿಗೆ ತರುವಲ್ಲಿ ಎಲ್ಲಾ ಇಲಾಖೆಗಳ ಸಹಕಾರ ಮಹತ್ವದ್ದಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಅಂಗನವಾಡಿ ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ, ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು ಪ್ರತಿಯೊಬ್ಬರು ಸರ್ಕಾರದ ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು, ದೇಶದಾದ್ಯಂತ ಈಗಾಗಲೇ ಕೊರೊನಾ ಮೂರನೇ ಅಲೆಯ ಭೀತಿ ಎದುರಾಗಿದ್ದು ವೈರಸ್ ವ್ಯಾಪಕವಾಗಿ ಹರಡದಂತೆ ಪ್ರತಿಯೊಬ್ಬರು ಜಾಗೃತರಾಗಿ ಇರುವಂತೆ ಮನವಿ ಮಾಡಿದರು.
ಸಿಡಿಪಿಒ ಕುಮಾರ್ ಮಾತನಾಡಿ ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಕೊರೊನಾ ಸಂಕಷ್ಟ ಕಾಲದಲ್ಲಿ ಸಹಾಯ ನೀಡುವ ಉದ್ದೇಶದಿಂದ ಆಹಾರ ಕಿಟ್ ಗಳನ್ನು ನೀಡಲಾಗುತ್ತಿದೆ, ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯ ಮಾಸ್ಕ್ ಧರಿಸಿ ಆಗಿಂದಾಗ್ಗೆ ಸ್ಯಾನಿಟೈಸರ್ ಬಳಸಿ ಅನಗತ್ಯವಾಗಿ ಜನಸಂದಣಿ ಪ್ರದೇಶಗಳಲ್ಲಿ ಸೇರದಂತೆ ಕೋರಿದರು.
ಈ ಸಂದರ್ಭ ತಾಪಂ ಇಒ ಸಿ.ಆರ್ ಕೃಷ್ಣಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಅಂಗವಿಕಲರ ಪುನರ್ವಸತಿ ಯೋಜನೆಯ ಸಹಾಯಕಿ ಲಕ್ಷ್ಮಿ, ಅಂಗನವಾಡಿ ನೌಕರರ ತಾಲ್ಲೂಕು ಅಧ್ಯಕ್ಷೆ ಕಾವೇರಮ್ಮ ಮತ್ತು ಪದಾಧಿಕಾರಿಗಳು ಮುಖಂಡರಾದ ಅಪೂರ್ವ ಮೋಹನ್, ದಿನೇಶ್, ಮಹದೇವ್ ಮತ್ತಿತರಿದ್ದರು.