ಪಿರಿಯಾಪಟ್ಟಣ: ಶಾಸಕ ಕೆ.ಮಹದೇವ್ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. 03/08/2021

ಈ ವೇಳೆ ಶಾಸಕರು ಮಾತನಾಡಿ ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷಭಾವ ತಾಳದೆ ಸೋಂಕಿತರನ್ನು ಹೋಮ್  ಐಸೊಲೇಷನ್ ಮಾಡದೆ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗಳಿಗೆ ಸ್ಥಳಾಂತರಿಸುವುದು ಹಾಗೂ ಬೈಲುಕುಪ್ಪೆ ಟಿಬೆಟಿಯನ್ ಕ್ಯಾಂಪ್ ನಲ್ಲಿ ಸೋಂಕಿತರು ಹೆಚ್ಚು ಕಂಡು ಬರುತ್ತಿರುವ ಹಿನ್ನೆಲೆ ಅಗತ್ಯ ಕ್ರಮ ಕೈಗೊಳ್ಳುವಂತೆ  ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಅವರಿಗೆ ಸೂಚಿಸಿದರು.

ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಈಗಾಗಲೇ ದೂರುಗಳು ಹೆಚ್ಚಾಗಿದ್ದು ಅಪಘಾತ ಸಂಖ್ಯೆ ಸಹ ಹೆಚ್ಚಾಗುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಪುರಸಭೆ ವತಿಯಿಂದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಅನುದಾನ ಮಂಜೂರಾಗಿದ್ದು ಶೀಘ್ರ ಕಾರ್ಯೋನ್ಮುಖರಾಗುವಂತೆ ಪುರಸಭಾ ಮುಖ್ಯಾಧಿಕಾರಿ ಎ.ಟಿ ಪ್ರಸನ್ನ ಅವರಿಗೆ ಸೂಚಿಸಿದರು.

ದರೋಡೆ ಅಪಘಾತ ಸೇರಿದಂತೆ ಪೊಲೀಸ್ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ  ಇನ್ಸ್ ಪೆಕ್ಟರ್ ಗಳಾದ ಜಗದೀಶ್ ಹಾಗೂ ಪ್ರಕಾಶ್ ಅವರು ಶಾಸಕರಿಗೆ ಮನವಿ ಮಾಡಿದಾಗ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

 ಕೆರೆಕಟ್ಟೆಗಳು ಮತ್ತು ಸ್ಮಶಾನ ಗಳ ಒತ್ತುವರಿ ತೆರವುಗೊಳಿಸಿದ ನಂತರ ಅವುಗಳನ್ನು ಮತ್ತೆ ಒತ್ತುವರಿ ಮಾಡಿಕೊಳ್ಳದಂತೆ ನೋಡಿಕೊಳ್ಳುವ ಮೂಲಕ ಸರ್ಕಾರಿ ಆಸ್ತಿ ಉಳಿಸುವ ಕೆಲಸವಾಗಬೇಕಿದೆ ಎಂದು ತಹಶೀಲ್ದಾರ್ ಕೆ.ಚಂದ್ರಮೌಳಿ ಹಾಗೂ ತಾ.ಪಂ ಇಒ  ಸಿ.ಆರ್ ಕೃಷ್ಣಕುಮಾರ್ ಅವರಿಗೆ ಶಾಸಕರು ಸೂಚಿಸಿದರು.

ತಾಲೂಕಿನಲ್ಲಿ 132 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಬರುವ ಎಲ್ಲಾ ಕೆರೆಗಳ ಹೂಳೆತ್ತುವ ಕೆಲಸ ದುರಸ್ತಿ ಮಾಡಿಸುವ ಕೆಲಸ ತಕ್ಷಣವೇ ಆಗಬೇಕಿದೆ ಮುಂದಿನ ದಿನಗಳಲ್ಲಿ ಕೆರೆಗೆ ನೀರು ಬಿಡುವಷ್ಟರಲ್ಲಿ ಈ ಕೆಲಸ ಪೂರ್ಣಗೊಂಡಿರಬೇಕು ಇಲ್ಲದಿದ್ದಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು ಅಗತ್ಯ ಕ್ರಮ ಕೈಗೊಳ್ಳುವುದು ಹಾಗೂ ಕೋವಿಡ್  ನಿರ್ವಹಣೆಯನ್ನು ಉತ್ತಮವಾಗಿ ನಿಭಾಯಿಸುವಂತೆ ಆಡಳಿತಾಧಿಕಾರಿ ಡಾ.ಸದಾಶಿವ ಅವರಿಗೆ ಶಾಸಕರು ಸೂಚಿಸಿದರು.

ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಉಪಕೇಂದ್ರಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದು ಹಾಗೂ ಸಾರ್ವಜನಿಕರಿಂದ ದೂರುಗಳು ಬರದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಕೆಪಿಟಿಸಿಎಲ್ ಇಇ ಮಾದೇಶ್ ಅವರಿಗೆ ಶಾಸಕರು ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ, ಜಿ.ಪಂ, ಗ್ರಾಮೀಣಾಭಿವೃದ್ಧಿ ಯೋಜನೆ, ಅರಣ್ಯ, ಶಿಕ್ಷಣ, ಕೃಷಿ, ರೇಷ್ಮೆ, ಅಬಕಾರಿ, ಪಶು ಸಂಗೋಪನೆ ಸೇರಿದಂತೆ  ಹಲವು ಇಲಾಖೆಗಳ ಸಮಸ್ಯೆ ಆಲಿಸಿ ಮತ್ತು ಪ್ರಗತಿ ಪರಿಶೀಲಿಸಲಾಯಿತು.

ಈ ಸಂದರ್ಭ ವಿವಿಧ ಇಲಾಖೆ ಮುಖ್ಯಸ್ಥರಾದ ಶಿವಕುಮಾರ್, ಮಂಜುನಾಥ್ , ಪ್ರಸಾದ್, ಜಯಂತ್, ಕುಮಾರ್, ಎಡಿಎ ಪ್ರಶಾಂತ್, ಬಿಇಓ ತಿಮ್ಮೇಗೌಡ, ರತನ್ ಕುಮಾರ್, ಡಾ.ಸೋಮಯ್ಯ, ಎಂ.ಕೆ ಪ್ರಕಾಶ್, ಸಬ್ ಇನ್ಸ್ ಪೆಕ್ಟರ್ ಬಿ.ಕೆ ಮಹೇಶ್ ಕುಮಾರ್, ಮತ್ತಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top