ಪಿರಿಯಾಪಟ್ಟಣ: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಸೇವೆ ಮಹತ್ವವಾದುದು ಎಂದು ಶಾಸಕ ಕೆ.ಮಹದೇವ್ ಹೇಳಿದರು. 10/08/2021

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಸಭೆ ನಡೆಸಿ ಮಾತನಾಡಿದ ಶಾಸಕರು ತಾಲ್ಲೂಕಿನಲ್ಲಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ಶುಶ್ರೂಕರು, ಸಿಬ್ಬಂದಿ ಜೊತೆಗೆ ಆಶಾ ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ, ಆರಕ್ಷಕ ಮತ್ತು ಕಂದಾಯ ಇಲಾಖೆ ಸೇವೆ ಶ್ಲಾಘನೀಯ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ರೋಗಿಗಳಿಗೆ ಉತ್ತಮ ಸೇವೆ ಒದಗಿಸಬೇಕು, ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಎಲ್ಲಾ ರೀತಿಯ ಪರೀಕ್ಷಾ ಸೌಲಭ್ಯ ಹಾಗೂ ಔಷಧಿ ಮಾತ್ರೆಗಳು ಸಿಗುವುದರಿಂದ ರೋಗಿಗಳಿಗೆ ಹೆಚ್ಚು ಹೊರೆಯಾಗದಂತೆ ಉತ್ತಮ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು, ಸ್ವಚ್ಚತೆ ಸೇರಿದಂತೆ ಆಡಳಿತ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಹೇಳಿ  ಕೊರೊನಾ ಸೋಂಕಿನ ಮೂರನೇ ಅಲೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. 

ಈ ವೇಳೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಹೊರಗುತ್ತಿಗೆ ನೌಕರರು ನಿಗದಿತ ಸಮಯಕ್ಕೆ ವೇತನ ಪಾವತಿಯಾಗದೆ ಜೀವನ ನಿರ್ವಹಣೆಗೆ ಸಮಸ್ಯೆಯಾಗುತ್ತಿದ್ದು ಪರಿಹಾರ ದೊರಕಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದಾಗ ಮನವಿಗೆ ಸ್ಪಂದಿಸಿದ ಶಾಸಕರು ಇಲಾಖೆ ಮೇಲಧಿಕಾರಿಗಳು ಹಾಗೂ ಹೊರಗುತ್ತಿಗೆ ಪಡೆದ ಮುಖ್ಯಸ್ಥರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿದ್ದರು ಅಗತ್ಯ ಶುಶ್ರೂಕರು ಮತ್ತು ಸಿಬ್ಬಂದಿ ನೇಮಕಾತಿಯಾಗಿರದ ಬಗ್ಗೆ ಶಾಸಕರ ಗಮನ ಸೆಳೆದಾಗ ಆರೋಗ್ಯ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಅಗತ್ಯವಿರುವ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಮುಖ್ಯಮಂತ್ರಿಗಳು ಮೈಸೂರಿಗೆ ಭೇಟಿ ನೀಡಿದ ಸಂದರ್ಭ ಈ ಹಿಂದೆ ಪಟ್ಟಣದಲ್ಲಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ತೆರೆಯಲು ಮಂಜೂರಾಗಿದ್ದ ಅನುದಾನವನ್ನು ಮತ್ತೆ ಮರು ಮಂಜೂರು ಮಾಡುವಂತೆ ಶಾಸಕರು ಕೋರಿದ್ದು ಮುಖ್ಯಮಂತ್ರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರ ಕಾರ್ಯರೂಪಕ್ಕೆ ಬಂದರೆ ತಾಲ್ಲೂಕಿನ ಜನತೆಗೆ ಮತ್ತಷ್ಟು ಹೆಚ್ಚಿನ ಸೇವೆ ಲಭಿಸಲಿದೆ ಎಂದರು.

ಆಸ್ಪತ್ರೆ ಆಡಳಿತಾಧಿಕಾರಿ ಸದಾಶಿವ್ ಮಾತನಾಡಿ ಕೆಲ ದಿನಗಳ ಹಿಂದಷ್ಟೇ ಪ್ರಭಾರ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು ಪಟ್ಟಣದ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ರೋಗಿಗಳಿಗೆ ದೊರಕುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.

ಈ ಸಂದರ್ಭ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರುಗಳಾದ ಡಾ.ಮಹದೇವಸ್ವಾಮಿ, ಡಾ.ಪ್ರಭು, ಡಾ.ದೇವಿಕಾ, ಡಾ.ಚಂದ್ರಾವತಿ, ಡಾ.ಶಿವಪ್ರಕಾಶ್, ಡಾ.ಪ್ರಮೋದ್, ಡಾ.ಅನಿಲ್, ಡಾ.ಪೃಥ್ವಿ, ಡಾ.ವಿಕ್ರಂ, ಫಾರ್ಮಸಿ ಅಧಿಕಾರಿಗಳಾದ ಶೇಷಗಿರಿ, ಮಂಜುನಾಥ, ಕಚೇರಿ ಅಧೀಕ್ಷಕ ರವಿಕುಮಾರ್, ಪ್ರಥಮ ದರ್ಜೆ ಸಹಾಯಕ ಮುತ್ತಣ್ಣ, ಪ್ರಯೋಗಶಾಲಾ ಅಧಿಕಾರಿಗಳಾದ ವೀರೇಶ್, ತೇಜಸ್, ಶುಶ್ರೂಕರು ಮತ್ತು ಸಿಬ್ಬಂದಿ ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top