
ಪಿರಿಯಾಪಟ್ಟಣ: ಕೃಷಿ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ದೊರೆಯುವ ಸವಲತ್ತುಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರ ಬಳಿ ಕೃಷಿ ಇಲಾಖೆ ಸಹಾಯದಡಿ ರೈತ ಫಲಾನುಭವಿಗಳಿಗೆ ಯಂತ್ರೋಪಕರಣ ವಿತರಿಸಿ ಅವರು ಮಾತನಾಡಿದರು, ರೈತರ ಅನುಕೂಲಕ್ಕಾಗಿ ಸರ್ಕಾರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ವಿತರಿಸುತ್ತಿದೆ, ಅರ್ಹ ಫಲಾನುಭವಿಗಳು ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿ ಶಕ್ತಿಮಾನ್ ಕಂಪನಿಯವರು ಉತ್ತಮ ಗುಣಮಟ್ಟದ ರೋಟಾವೇಟರ್ ಗಳನ್ನು ರೈತರಿಗೆ ಸರಬರಾಜು ಮಾಡುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಮಾತನಾಡಿ ತಂಬಾಕು ಬೆಳೆಯ ನಂತರ ಮತ್ತೊಂದು ಬೆಳೆ ಬೆಳೆಯಲು ರೈತರು ಉಳುಮೆ ಮಾಡಿ ಭೂಮಿ ಸಿದ್ಧತೆ ಮಾಡಿಕೊಳ್ಳಲು ರೋಟೋವೇಟರ್ ಗಳ ವಿತರಣೆಗೆ ಕೃಷಿ ಇಲಾಖೆಗೆ ಹೆಚ್ಚಿನ ಮನವಿಗಳು ಬರುತ್ತಿದ್ದು ಆದ್ಯತೆಗನುಸಾರ ರಿಯಾಯಿತಿ ದರದಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ ಎಂದರು.
ಈ ವೇಳೆ ಚಪ್ಪರದಹಳ್ಳಿಯ ಸಣ್ಣಸ್ವಾಮಿಗೌಡ, ಹಿಟ್ನೆಹೆಬ್ಬಾಗಿಲಿನ ಪುನೀತ್ ಕುಮಾರ್, ಹರದೂರಿನ ಶಿವಗಂಗಾದರ, ಸುಂಡವಾಳಿನ ಹರವೆಗೌಡ, ಪಿ.ಬಸವನಹಳ್ಳಿಯ ಕರಿಯಪ್ಪ, ಚೌತಿಯ ರಾಮೇಗೌಡ, ಆರ್.ಡಿ ಕೊಪ್ಪಲಿನ ತಾಯಮ್ಮ, ಹಬಟುಾರಿನ ಸರೋಜಮ್ಮ, ಕಿತ್ತೂರಿನ ನಾಗರಾಜ್, ಮಾಕೋಡಿನ ಈರಣ್ಣ ಅವರಿಗೆ ರೋಟೋವೇಟರ್ ಯಂತ್ರ ಹಾಗೂ ಭೂತನಹಳ್ಳಿ ಗ್ರಾಮದ ರಾಜು ಅವರಿಗೆ ಕಳೆ ಕೀಳುವ ಯಂತ್ರವನ್ನು ಶಾಸಕರು ವಿತರಿಸಿದರು.
ಈ ಸಂದರ್ಭ ಕೃಷಿ ಅಧಿಕಾರಿ ದಿವಾಕರ್, ಶಕ್ತಿಮಾನ್ ರೋಟಾವೇಟರ್ ಕಂಪೆನಿಯ ಚಂದ್ರಶೇಖರ, ಮುಖಂಡರಾದ ಬೆಕ್ಕರೆ ಯತೀಶ್, ಬಸವರಾಜೇ ಅರಸ್ ಮತ್ತಿತರಿದ್ದರು.