
ಪಿರಿಯಾಪಟ್ಟಣ: 14 ಮತ್ತು 15 ನೇ ಹಣಕಾಸು ಯೋಜನೆ ಮುಖಾಂತರ ಕೇಂದ್ರ ಸರ್ಕಾರ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ತಾಲ್ಲೂಕಿನ ಆವರ್ತಿ ಗ್ರಾಮದಲ್ಲಿ ನೂತನ ಗ್ರಾ.ಪಂ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಮೊದಲ ಬಾರಿಗೆ 2014ರಲ್ಲಿ ಸಂಸದನಾಗಿ ಆಯ್ಕೆಯಾದ ಸಂದರ್ಭ ಗ್ರಾ.ಪಂ ಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುದಾನದ ಕೊರತೆ ಇತ್ತು, ಸಂಸದರೆಲ್ಲರು ಪ್ರಧಾನಿಯವರಿಗೆ ಮನವಿ ಮಾಡಿದ ಸಂದರ್ಭ 14 ನೇ ಹಣಕಾಸು ಯೋಜನೆಯಡಿ ಅನುದಾನವನ್ನು ನೇರ ಗ್ರಾ.ಪಂ ಗಳಿಗೆ ನೀಡುವ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿದರು, ಕೇಂದ್ರ ಸರ್ಕಾರದ 14 ಮತ್ತು 15 ನೇ ಹಣಕಾಸು ಹೆಚ್ಚುವರಿ ಅನುದಾನ ಹಾಗು ನರೇಗಾ ಯೋಜನೆಯಡಿ ತಾಲ್ಲೂಕಿನಾದ್ಯಂತ ಗ್ರಾ.ಪಂ ಗಳಿಗೆ ಉತ್ತಮ ಸ್ವಂತ ಕಟ್ಟಡ ನಿರ್ಮಿಸಲಾಗಿದೆ, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರು ಸೌಲಭ್ಯ ದೊರಕಿಸಲಾಗಿದೆ, ಮುಂದಿನ ದಿನಗಳಲ್ಲಿ ಬಯಲು ಮುಕ್ತ ಶೌಚಾಲಯ ಗುರಿ ಹೊಂದಲಾಗಿದ್ದು ಪಿರಿಯಾಪಟ್ಟಣದ ಸಮಗ್ರ ಅಭಿವೃದ್ಧಿಗೆ ಶಾಸಕ ಕೆ.ಮಹದೇವ್ ಅವರೊಂದಿಗೆ ಒಟ್ಟಿಗೆ ಸಹಕರಿಸುವುದಾಗಿ ಹೇಳಿ ಅಭಿವೃದ್ಧಿ ರಾಜಕಾರಣಕ್ಕೆ ಪಕ್ಷಾತೀತವಾಗಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು. ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಹುಣಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ನಿರ್ವಹಿಸುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಿದ್ದು ಅವರ ಸೇವೆಯನ್ನು ತಾಲ್ಲೂಕಿನ ಜನತೆ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ಈ ಹಿಂದೆ ನರೇಗಾ ಯೋಜನೆ ಮೂಲಕ ಅಭಿವೃದ್ಧಿ ಅಸಾಧ್ಯ ಎನ್ನುತ್ತಿದ್ದ ಪಿಡಿಒ ಗಳು 14 ಮತ್ತು 15 ನೇ ಹಣಕಾಸು ಅನುದಾನ ಬಳಸಿ ತಮ್ಮ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ, ಗ್ರಾ.ಪಂ ಸದಸ್ಯರಿಗೂ ಸಹ ಅಭಿವೃದ್ಧಿ ಕಾರ್ಯ ನಿರ್ವಹಿಸುವ ಬದ್ಧತೆ ಇರಬೇಕು, ಶಾಸಕನಾದಾಗಿನಿಂದ ವಿಶ್ರಮಿಸದೆ ಶಕ್ತಿಮೀರಿ ತಾಲ್ಲೂಕಿನ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ ಎಂದರು.

ಈ ಸಂದರ್ಭ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಸಹಾಯಕ ನಿರ್ದೇಶಕ ರಘುನಾಥ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಗ್ರಾ.ಪಂ ಅಧ್ಯಕ್ಷ ಶಿವ, ಉಪಾಧ್ಯಕ್ಷೆ ವಿಂಧ್ಯಾಶ್ರೀ, ಸದಸ್ಯರಾದ ಮಂಜುನಾಥ್, ಮೋಹನ್, ಪಿಡಿಒ ಅಭಿ ಮಹಮ್ಮದ್, ಮತ್ತು ಸಿಬ್ಬಂದಿ, , ಜಿ.ಪಂ ಎಇಇ ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಹಾರಂಗಿ ಇಲಾಖೆ ಎಇ ನವೀನ್ ಗ್ರಾಮಸ್ಥರು ಹಾಜರಿದ್ದರು.
