
ಪಿರಿಯಾಪಟ್ಟಣ : ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ನೀಡುವ ಪ್ರಾಮುಖ್ಯವನ್ನು ಸಂಸ್ಕಾರ ಕಲಿಸುವುದಕ್ಕೂ ನೀಡಬೇಕು ಎಂದು ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಹೇಳಿದರು. ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು, ವಿದ್ಯೆ ಮತ್ತು ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಕನ್ನಡ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯ ಎಂದರು.
ಶಾಸಕ ಕೆ.ಮಹದೇವ್ ರವರು ಮಾತನಾಡಿ ತಾಲೂಕಿನ ಜನಪ್ರತಿನಿಧಿಯಾಗಿ ಕನ್ನಡದ ತೇರು ಎಳೆಯುವ ಕೆಲಸ ಮಾಡುತ್ತಿರುವವರಿಗೆ ನನ್ನ ಕೈಲಾದ ಸಹಕಾರ ನೀಡುವುದು ನನ್ನ ಕರ್ತವ್ಯ, ಕೋವಿಡ್ ಸಂಕಷ್ಟದ ಪರಿಸ್ಥಿತಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದೆ ಇದೆಲ್ಲವನ್ನು ಮೆಟ್ಟಿನಿಂತು ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ, ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸಲು ಭೂಮಿ ನೀಡುವ ಬಗ್ಗೆ ಕಂದಾಯ ಇಲಾಖೆ ಸಚಿವರ ಬಳಿ ಕಡತವಿದ್ದು ಶೀಘ್ರದಲ್ಲಿ ಭವನ ನಿರ್ಮಿಸಲು ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.
ಜನಪದ ವಿದ್ವಾಂಸ ಡಾ.ಪಿ.ಕೆ ರಾಜಶೇಖರ್ ಮಾತನಾಡಿ ಮಕ್ಕಳಿಗೆ ಸಂಸ್ಕೃತಿ ಕಲಿಸಿದರೆ ಅವರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಲಿದ್ದಾರೆ, ಮಕ್ಕಳಿಗೆ ಬೌದ್ಧಿಕ ಶಕ್ತಿಯನ್ನು ಬೆಳೆಸುವ ಜೊತೆಗೆ ಹೃದಯ ಶ್ರೀಮಂತಿಕೆಯನ್ನು ಕಲಿಸಬೇಕು ಆಗ ಮಾತ್ರ ಅವರು ನಿಜವಾದ ಅರ್ಥದಲ್ಲಿ ಕನ್ನಡಿಗರಾಗಲಿದ್ದಾರೆ, ತಾಲ್ಲೂಕಿನ ಐತಿಹಾಸಿಕ ಚರಿತ್ರೆ ಕುರಿತು 13 ಕೃತಿ ರಚಿಸಿದ್ದೇನೆ ಈ ಕೆಲಸವನ್ನು ಉತ್ಸಾಹಿ ಯುವಕರು ಮುಂದುವರಿಸುವಂತೆ ಮನವಿ ಮಾಡಿದರು.
ಕಸಾಪ ಜಿಲ್ಲಾಧ್ಯಕ್ಷ ವೈ.ಡಿ ರಾಜಣ್ಣ ಮಾತನಾಡಿ ಪಿರಿಯಾಪಟ್ಟಣ ತಾಲ್ಲೂಕು ಕಸಾಪ ಹಲವು ವಿಶೇಷ ಕಾರ್ಯಕ್ರಮಗಳ ಆಯೋಜನೆ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಡಿಡಿಪಿಐ ರಾಮಚಂದ್ರ ರಾಜೇಅರಸ್, ಕಸಾಪ ತಾಲ್ಲೂಕು ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಕನ್ನಡ ಭಾಷಾ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉತ್ತಮ ಫಲಿತಾಂಶ ಪಡೆದ ಶಾಲೆಗಳು, ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು, ಇದೇ ವೇಳೆ ಶಾಸಕ ಕೆ.ಮಹದೇವ್ ದಂಪತಿ, ಪುತ್ರ ಪಿ.ಎಂ ಪ್ರಸನ್ನ ಮತ್ತು ಡಿಡಿಪಿಐ ರಾಮಚಂದ್ರರಾಜೇ ಅರಸ್, ಬಿಇಒ ವೈ.ಕೆ ತಿಮ್ಮೇಗೌಡ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಸೇರಿದಂತೆ ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮೋಹನ್ ಕುಮಾರ್, ಕಸಾಪ ಗೌರವ ಸಲಹೆಗಾರ ಅಣ್ಣಯ್ಯ ಶೆಟ್ಟಿ, ಪುರಸಭಾ ಸದಸ್ಯ ಪಿ.ಸಿ ಕೃಷ್ಣ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಎನ್ ವಿಜಯ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗಶೆಟ್ಟಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ, ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಬಿ.ವಿ ಮಂಜುನಾಥ್, ಜಿಲ್ಲಾ ಕಸಾಪದ ಚಂದ್ರಶೇಖರ್, ಮಡ್ಡಿಕೆರೆ ಗೋಪಾಲ್, ಸಾಹಿತಿ ಅಂಬಲಾರೆ ಬಸವೇಗೌಡ, ರೋಟರಿ ಮಾಜಿ ಅಧ್ಯಕ್ಷ ಬಿ.ಆರ್ ಸತೀಶ್ ಕುಮಾರ್, ಕಸಾಪ ರಾವಂದೂರು ಅಧ್ಯಕ್ಷ ಶೆಟ್ಟಹಳ್ಳಿ ಮಹದೇವ್, ಹಾರನಹಳ್ಳಿ ಅಧ್ಯಕ್ಷ ಸಿ.ಅಶ್ವತ್ಥ್, ಪದಾಧಿಕಾರಿಗಳಾದ ಆಲನಹಳ್ಳಿ ಕೆಂಪರಾಜು, ನವೀನ್ ಕುಮಾರ್, ಮಹಮ್ಮದ್ ಶಫಿ, ನಂಜುಂಡಸ್ವಾಮಿ, ವೆಂಕಟೇಶ್, ಬಿ.ಸಿ ಮಹದೇವಪ್ಪ, ಮಲ್ಲೇಶ್, ಯುವರಾಜ್ ಮತ್ತಿತರರಿದ್ದರು.