
ಪಿರಿಯಾಪಟ್ಟಣದ ತಾ.ಪಂ ಬಳಿಯ ಕಚೇರಿಯಲ್ಲಿ ಶಾಸಕ ಕೆ.ಮಹದೇವ್ ಅವರು ಸುದ್ದಿಗೋಷ್ಠಿ ನಡೆಸಿದರು. ನಾನು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಕಾರ್ಯಕರ್ತರು ಕಿವಿಕೊಡದಂತೆ ಶಾಸಕ ಕೆ.ಮಹದೇವ್ ಮನವಿ ಮಾಡಿದರು. ಪಟ್ಟಣದ ತಾ.ಪಂ ಕಚೇರಿ ಬಳಿಯ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶಾಸಕರು ನನಗೆ ರಾಜಕೀಯವಾಗಿ ಸ್ಥಾನಮಾನ ನೀಡಿದ ಜೆಡಿಎಸ್ ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ, ಸುಳ್ಳು ವದಂತಿಗಳಿಗೆ ಕಾರ್ಯಕರ್ತರು ಕಿವಿಕೊಟ್ಟು ಗೊಂದಲಕ್ಕೀಡಾಗಬೇಡಿ, ಶಾಸಕ ಜಿ.ಟಿ ದೇವೇಗೌಡ ರವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾದ ಮೇಲೆ ಅವರೊಂದಿಗೆ ನಾನು ಸಹ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತೇನೆ ಎಂದು ಕೆಲ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ವರದಿ ಬಂದ ಹಿನ್ನೆಲೆ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದು ಅವರಲ್ಲಿನ ಅನುಮಾನಗಳಿಗೆ ತೆರೆ ಎಳೆಯಬೇಕೆಂಬ ಉದ್ದೇಶದಿಂದ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡುತ್ತಿದ್ದೇನೆ ನನಗೆ ರಾಜಕೀಯ ಸ್ಥಾನಮಾನ ನೀಡಿ ಶಾಸಕ ಹುದ್ದೆಯನ್ನು ನೀಡಿರುವುದು ಜೆಡಿಎಸ್ ಪಕ್ಷ, ಜಿ.ಪಂ ಹಾಗೂ ತಾ.ಪಂ ಚುನಾವಣೆ ದಿನಾಂಕ ಸಮೀಪಿಸುತ್ತಿರುವುದರಿಂದ ವಿರೋಧಿಗಳು ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ, ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಅತ್ಯಂತ ಪ್ರಬಲವಾಗಿದೆ, ನಾನು ಶಾಸಕನಾದಾಗಿನಿಂದ ಹೆಚ್ಚು ಆತ್ಮವಿಶ್ವಾಸದಿಂದ ಜೆಡಿಎಸ್ ಪಕ್ಷದ ಸಂಘಟನೆ ಮತ್ತು ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿರುವುದು ತಾಲ್ಲೂಕಿನ ಜನತೆಗೆ ಅರಿವಿದೆ, ಕಳೆದ 30 ವರ್ಷದಿಂದ ರಾಜಕೀಯ ಮಾಡಿ ಅಧಿಕಾರ ಅನುಭವಿಸಿದವರು ಈ ಕ್ಷೇತ್ರದ ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಜನರು ತಾಲ್ಲೂಕಿನಾದ್ಯಂತ ಹೋದೆಡೆಯಲ್ಲೆಲ್ಲ ಅಭಿವೃದ್ಧಿ ಕಾರ್ಯಕ್ಕೆ ಒತ್ತಡ ತರುತ್ತಿದ್ದರು ಹಂತ ಹಂತವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದೇನೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ ಮಾತನಾಡಿ ಈ ಹಿಂದೆ ಜಿ.ಟಿ ದೇವೇಗೌಡರ ಜೊತೆ ಶಾಸಕ ಕೆ.ಮಹದೇವ್ ಅವರು ಗುರುತಿಸಿಕೊಂಡಿದ್ದ ನಿಜ ಆದರೆ ಯಾವ ಸಂದರ್ಭದಲ್ಲಿ ಯಾವುದೋ ಕಾರಣಕ್ಕಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಹಾಗೆಂದು ಜಿ.ಟಿ ದೇವೇಗೌಡರ ಜತೆ ನಮ್ಮ ಶಾಸಕರು ಪಕ್ಷ ತೊರೆಯುವುದಿಲ್ಲ, ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಯ ದೃಷ್ಟಿಯಿಂದ ನಮ್ಮ ಪಕ್ಷದ ಕೆಲವು ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಯಾರು ಸಹ ಪಕ್ಷ ತೊರೆಯುತ್ತಿಲ್ಲ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಶಾಸಕ ಕೆ.ಮಹದೇವ್ ಅವರ ನೇತೃತ್ವದಲ್ಲಿ ಭದ್ರ ನೆಲೆ ಕಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಜಿ.ಪಂ ಮಾಜಿ ಸದಸ್ಯ ಶಿವಣ್ಣ, ತಾ.ಪಂ ಮಾಜಿ ಸದಸ್ಯ ಜವರಪ್ಪ, ಕಂಪಲಾಪುರ ಪಿಎಸಿಸಿಎಸ್ ಅಧ್ಯಕ್ಷ ಕುಮಾರ್, ಟಿಎಪಿಎಂಎಸ್ ನಿರ್ದೇಶಕ ಡಿ.ಎ ನಾಗೇಂದ್ರ ಹಾಜರಿದ್ದರು.