
ಧರ್ಮದ ಪರವಿದ್ದ ಶ್ರೀಕೃಷ್ಣನ ಲೀಲೆಗಳಿಗೆ ಅಂತ್ಯವಿಲ್ಲ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಸಮಾಜದಲ್ಲಿನ ದುಷ್ಟರ ಸಂಹಾರಕ್ಕಾಗಿ ಕಾಲಕಾಲಕ್ಕೆ ತಕ್ಕಂತೆ ಹಲವು ವೇಷಗಳಲ್ಲಿ ಶ್ರೀಕೃಷ್ಣ ಜನಿಸಿದ್ದನು, ಧರ್ಮ ಸಂಸ್ಥಾಪನೆಗೆ ಶ್ರೀಕೃಷ್ಣ ಮತ್ತೆ ಮತ್ತೆ ಹುಟ್ಟಿ ಬರಲಿದ್ದಾನೆ ಎಂಬ ಪ್ರತೀತಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿದೆ, ನಾವು ಹಲವು ಜಯಂತಿಗಳನ್ನು ಆಚರಿಸುತ್ತೇವೆ ಆದರೆ ಭಗವಂತನ ಜಯಂತಿ ಆಚರಿಸುವ ವಿಷಯದಲ್ಲಿ ತಾತ್ಸಾರ ಮನೋಭಾವ ಬೇಡ, ಭಗವಂತನ ಜಯಂತಿ ಆಚರಿಸುವುದು ನಮ್ಮ ಸೌಭಾಗ್ಯ ಎಂದು ಹೇಳಿ ಗೊಲ್ಲ ಅಥವಾ ಯಾದವ ಸಮುದಾಯದವರು ತಾಲೂಕಿನಲ್ಲಿ ಹಿಂದುಳಿದಿದ್ದು ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಬದ್ಧನಾಗಿದ್ದೇನೆ ಎಂದರು
ಬಿ ಇ ಒ ವ್ಯಕೆ ತಿಮ್ಮೇಗೌಡ ರವರು ಮಾತನಾಡಿ ಧರ್ಮಕ್ಕೆ ತೊಂದರೆಯಾದಾಗ, ಒಳ್ಳೆಯವರಿಗೆ ಕೆಡಕು ಉಂಟಾದಾಗ ನಾನು ಹುಟ್ಟಿ ಬರುವೆ ಎನ್ನುವ ಕೃಷ್ಣ ನಮ್ಮೆಲ್ಲರ ಅಗೋಚರ ಆಪದ್ಬಾಂಧವ, ಮಹಾಭಾರತದ ಕಥೆಯಲ್ಲಿ ಭವಿಷ್ಯ ಮತ್ತು ವರ್ತಮಾನ ಎರಡನ್ನು ತಿಳಿದವನು ಎಂದು ಕೃಷ್ಣನನ್ನು ಭಾವಿಸಲಾಗಿತ್ತು, ಕಾರಾಗೃಹದಲ್ಲಿ ಜನಿಸಿ ಭರತ ಖಂಡವನ್ನು ಬೆಳಗಿಸಿದ ಮಹಾನ್ ಪುರುಷ ಶ್ರೀಕೃಷ್ಣ ಎಂದರು.
ಪ್ರಭಾರ ತಹಸೀಲ್ದಾರ್ ಯದು ಗಿರೀಶ್ ಮಾತನಾಡಿ ಸಮಾಜದಲ್ಲಿ ಅಧರ್ಮ ತಾಂಡವವಾಡುತ್ತಿದ್ದ ಸಂದರ್ಭ ಧರ್ಮದ ಪರ ನಿಂತು ಸತ್ಯಕ್ಕೆ ಜಯ ದೊರಕಿಸಿಕೊಟ್ಟ ಕೀರ್ತಿ ಶ್ರೀ ಕೃಷ್ಣನದು ಎಂದರು. ಯಾದವ ಯುವಕ ಸಂಘದ ಅಧ್ಯಕ್ಷ ಪಿ.ಡಿ ಪ್ರಸನ್ನ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಸರ್ವೆ ಅಧಿಕಾರಿ ಎಂ.ಕೆ ಪ್ರಕಾಶ್ ಮಾತನಾಡಿದರು.
ಈ ಸಂದರ್ಭ ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಮಾಜಿ ಸದಸ್ಯೆ ತನುಜಾ ರಮೇಶ್, ಜಿ.ಪಂ ಎಇಇ ಮಂಜುನಾಥ್, ಆರ್ ಡಬ್ಲ್ಯುಎಸ್ ಎಇಇ ಶಿವಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಸಾರಿಗೆ ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್, ಚೆಸ್ಕಾಂ ಎಇಇ ಗಳಾದ ಅನಿಲ್, ಕುಮಾರ್, ಶಿರಸ್ತೆದಾರ್ ಗಳಾದ ನಂದಕುಮಾರ್, ಟ್ರಿಜಾ, ಉಪ ತಹಸೀಲ್ದಾರ್ ಗಳಾದ ಶಶಿಧರ್, ಶುಭ, ಯಾದವ ಸಮುದಾಯದ ಮುಖಂಡರಾದ ಕುಮಾರ್, ವೆಂಕಟೇಶ್, ಮೋಹನ್ ಯಾದವ್, ತಾಲ್ಲೂಕು ಆಡಳಿತ ಕಚೇರಿ ಸಿಬ್ಬಂದಿ ಮತ್ತು ಯಾದವ ಸಮುದಾಯದವರು ಹಾಜರಿದ್ದರು.