
ಈ ವೇಳೆ ಸಂಸದ ಪ್ರತಾಪ್ ಸಿಂಹ ಮಾತನಾಡಿ ತಾಲ್ಲೂಕಿನ 34 ಗ್ರಾ.ಪಂ ಗಳ 36 ಗ್ರಾಮಗಳಲ್ಲಿ ಸರ್ವೋದಯ ಯೋಜನೆಯಡಿ ಹಾಗು ನರೇಗಾ ಯೋಜನೆಯಡಿ 44.68 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು ಇವೆಲ್ಲವೂ ಕೇಂದ್ರ ಪುರಸ್ಕೃತ ಯೋಜನೆಗಳಾಗಿವೆ, ತಲೆಗೊಂದು ಸೂರು ಪ್ರತಿ ಮನೆಗೂ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಉತ್ತಮ ಕರ್ತವ್ಯ ನಿರ್ವಹಿಸುತ್ತಿದೆ, ಗ್ರಾ.ಪಂ ಗಳಿಗೆ ದೊರೆಯುತ್ತಿರುವ ಅನುದಾನ ಸಂಪೂರ್ಣವಾಗಿ ಕೇಂದ್ರ ಸರ್ಕಾರದ್ದಾಗಿದೆ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು, ಚುನಾವಣೆ ಸಂದರ್ಭ ಮಾತ್ರ ಪಕ್ಷದ ರಾಜಕಾರಣ ಗೆದ್ದ ಮೇಲೆ ಪಕ್ಷಾತೀತ ಅಭಿವೃದ್ಧಿಯ ರಾಜಕಾರಣ ಮಾಡುತ್ತಿದ್ದು ಶಾಸಕ ಕೆ.ಮಹದೇವ್ ಅವರು ಸಹ ತಾಲೂಕಿನ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುತ್ತಿರುವುದಾಗಿ ಶ್ಲಾಘಿಸಿದರು.
ಉತ್ತಮ ಅಧಿಕಾರಿ: ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಹುಣಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ನಿರ್ವಹಿಸುವ ಮೂಲಕ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗಿದ್ದು ಅವರ ಸೇವೆಯನ್ನು ತಾಲ್ಲೂಕಿನ ಜನತೆ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಂಸದ ಪ್ರತಾಪ್ ಸಿಂಹ ಅವರು ಇಒ ಸಿ.ಆರ್ ಕೃಷ್ಣಕುಮಾರ್ ಅವರನ್ನು ಶ್ಲಾಘಿಸಿದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ಗಾಂಧೀಜಿಯವರು ಕಂಡ ರಾಮರಾಜ್ಯ ಹಾಗೂ ಸ್ವಚ್ಛ ಭಾರತದ ಕನಸನ್ನು ನರೇಗಾ ಯೋಜನೆಯ ಮೂಲಕ ನನಸು ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ, ಈ ಹಿಂದೆ ನರೇಗಾ ಯೋಜನೆ ಮೂಲಕ ಅಭಿವೃದ್ಧಿ ಅಸಾಧ್ಯ ಎನ್ನುತ್ತಿದ್ದ ಪಿಡಿಒ ಗಳು 14 ಮತ್ತು 15 ನೇ ಹಣಕಾಸು ಅನುದಾನ ಬಳಸಿ ತಮ್ಮ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ, ಗ್ರಾ.ಪಂ ಸದಸ್ಯರು ಸಹ ಸೇವಾ ಮನೋಭಾವನೆ ಮೈಗೂಡಿಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಬೇಕು, ಸಂಸದ ಪ್ರತಾಪ್ ಸಿಂಹ ಅವರ ಸಹಕಾರದಿಂದ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಈ ವೇಳೆ ಕಂಪಲಾಪುರದಲ್ಲಿ ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ಖಬರಸ್ತಾನ್ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಹಿಟ್ನೆಹೆಬ್ಬಾಗಿಲು ಗ್ರಾ.ಪಂ ವತಿಯಿಂದ ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಅಮೃತ ಉದ್ಯಾನವನ, ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್, ಕೊಳವೆಬಾವಿಗೆ ಇಂಗುಗುಂಡಿ ಕಾಮಗಾರಿ, ಮಳೆ ನೀರಿನ ಕೊಯ್ಲು ಘಟಕ, ಕಂಪಲಾಪುರ ಗ್ರಾಮದ ಖಬರ್ ಸ್ತಾನ್ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಕೆಂಪಿ ಕೆರೆ ಕಾಮಗಾರಿ ವೀಕ್ಷಣೆ, ಸನ್ಯಾಸಪುರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ಚಾಲನೆ, ಚಿಟ್ಟೇನಹಳ್ಳಿ ಗ್ರಾ.ಪಂ ವತಿಯಿಂದ ಚೌಡೇನಹಳ್ಳಿ ಗ್ರಾಮದಲ್ಲಿ ಮಾದರಿ ಗ್ರಾಮ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಕೆಎಸ್ ಕೆ ನಗರ ಮತ್ತು ಸಂಪಿಗೆಕಟ್ಟೆ ಗ್ರಾಮಗಳಲ್ಲಿ ನೂತನ ಅಂಗನವಾಡಿ ಕೇಂದ್ರಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಸಹಾಯಕ ನಿರ್ದೇಶಕ ರಘುನಾಥ್, ಸಿಡಿಪಿಒ ಕುಮಾರ್, ಕೆಡಬ್ಲ್ಯುಎಸ್ಎಸ್ ಬಿ ನಿರ್ದೇಶಕ ಆರ್.ಟಿ ಸತೀಶ್, ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಮ್ಮ, ಉಪಾಧ್ಯಕ್ಷ ಮಂಜುನಾಯ್ಕ ಮತ್ತು ಸದಸ್ಯರು, ಪಿಡಿಒ ಪ್ರಶಾಂತ್, ಕಾರ್ಯದರ್ಶಿ ದಮಯಂತಿ ಮತ್ತು ಸಿಬ್ಬಂದಿ, ಚೌತಿ ಗ್ರಾ.ಪಂ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ಬೂದಿತಿಟ್ಟು ರವಿಚಂದ್ರ ಮತ್ತು ಸದಸ್ಯರು, ಪಿಡಿಒ ಮೋಹನ್ ಕುಮಾರ್ ಮತ್ತು ಸಿಬ್ಬಂದಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಜೇಗೌಡ, ಬಿಇಒ ವೈ.ಕೆ ತಿಮ್ಮೇಗೌಡ, ಜಿ.ಪಂ ಎಇಇ ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪರಮೇಶ್, ಪುರಸಭಾ ನಾಮನಿರ್ದೇಶಿತ ಸದಸ್ಯರಾದ ನಳಿನಿ, ಪ್ರಸಾದ್, ಶಿವರಾಮೇಗೌಡ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಎಸ್.ಮಲ್ಲೇಶ್, ವಿವಿಧ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಜರಿದ್ದರು.