ಮಳೆಯಿಂದ ಹಾನಿಗೊಳಗಾಗುತ್ತಿದ್ದ ತಾಲ್ಲೂಕಿನ ಕಾವೇರಿ ನದಿ ತೀರದ ಸೇತುವೆಗಳ ಅಭಿವೃದ್ಧಿಯ 6 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಕೆ.ಮಹದೇವ್ ಅವರು ಚಾಲನೆ ನೀಡಿದರು. 01/10/2021

ಪಿರಿಯಾಪಟ್ಟಣ: ಮಳೆಯಿಂದ ಹಾನಿಗೊಳಗಾಗುತ್ತಿದ್ದ ತಾಲ್ಲೂಕಿನ ಕಾವೇರಿ ನದಿ ತೀರದ ಸೇತುವೆಗಳ ಅಭಿವೃದ್ಧಿಯ 6 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಕೆ.ಮಹದೇವ್ ಅವರು ಚಾಲನೆ ನೀಡಿದರು. ತಾಲ್ಲೂಕಿನ ಮುತ್ತಿನಮುಳುಸೋಗೆ ಆವರ್ತಿ ಹಾಗೂ ಕೊಪ್ಪ ಗ್ರಾಮದ ಸೇತುವೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಮಹದೇವ್ ಅವರು ಚಾಲನೆ ನೀಡಿ ಮಾತನಾಡಿ ಪ್ರತಿವರ್ಷ ಮಳೆಗಾಲದಲ್ಲಿ ಕಾವೇರಿ ನದಿ ತೀರದ ಪ್ರದೇಶಗಳು ಮುಳುಗಿ ಜನಜೀವನ ಅಸ್ತವ್ಯಸ್ತವಾಗಿತ್ತು, ಸಂಪರ್ಕ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದ ಪರಿಣಾಮ ರಸ್ತೆ ಸಂಪರ್ಕ ಬಂದ್ ಆಗಿ ಸ್ಥಳೀಯರಿಗೆ ಅನಾನುಕೂಲವಾಗುತ್ತಿತ್ತು, ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳು ಜಲಾವೃತವಾಗಿ ನಷ್ಟಉಂಟಾಗುತ್ತಿದ್ದ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಮನವಿ ಮಾಡುತ್ತಿದ್ದರೂ ಅನುದಾನದ ಕೊರತೆಯಿಂದಾಗಿ ಕಾಮಗಾರಿಗೆ ಚಾಲನೆ ನೀಡುವುದು ವಿಳಂಬವಾಯಿತು, ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿ ಶೀಘ್ರ ಅನುದಾನ ಮಂಜೂರು ಮಾಡಿಕೊಡಬೇಕು ಇಲ್ಲವಾದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಿದಾಗ ಸಮಸ್ಯೆ ಬಗೆಹರಿಸುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು ಅದರಂತೆ ಸಂಪರ್ಕ ಸೇತುವೆಗಳ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ, ಕಾಮಗಾರಿ ನಿರ್ವಹಿಸುವವರು ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಿ ಸಾಕಷ್ಟು ಕಾಲ ಬಾಳಿಕೆ ಬರುವ ಕಾಮಗಾರಿ ನಡೆಸುವಂತೆ ಸೂಚಿಸಿದರು.

ವಿರೋಧ ಪಕ್ಷದ ಶಾಸಕನಾಗಿದ್ದರೂ ಸರ್ಕಾರದ ಮೇಲೆ ಒತ್ತಡ ಹೇರಿ ತಾಲ್ಲೂಕಿನ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸುತ್ತಿದ್ದೇನೆ, ಅಭಿವೃದ್ಧಿ ಸಹಿಸದೆ ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ, ಈ ಹಿಂದೆ ಆಡಳಿತ ನಡೆಸಿದವರ ಅಭಿವೃದ್ಧಿ ಹಾಗೂ ನನ್ನ 3 ವರ್ಷದ ಅಭಿವೃದ್ಧಿಯ ಬಗ್ಗೆ ತಾಲ್ಲೂಕಿನ ಜನತೆಗೆ ಗೊತ್ತಿದ್ದು ಟೀಕೆಗಳು ನನಗೆ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚು ಮಾಡಲು ಪ್ರೇರೇಪಿಸುತ್ತದೆ, ಈ ಹಿಂದೆ ಆಡಳಿತ ನಡೆಸಿದವರ ಲೋಪದಿಂದಾಗಿ ನಂಜುಂಡಪ್ಪರವರ ವರದಿ ಆಧಾರದ ಮೇಲೆ ಅಕ್ಕಪಕ್ಕದ ತಾಲ್ಲೂಕುಗಳಿಗೆ ಹೋಲಿಸಿದರೆ ನಮ್ಮ ತಾಲ್ಲೂಕಿಗೆ ಅನುದಾನ ಕೊರತೆ ಇದೆ ಇದನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದು ಹೆಚ್ಚುವರಿಯಾಗಿ ವಿಶೇಷ ಅನುದಾನ ಮಂಜೂರು ಮಾಡಿಕೊಡುವ ಭರವಸೆಯನ್ನು ಸರ್ಕಾರ ನೀಡಿದೆ ಎಂದರು.

ಇದೇ ವೇಳೆ ದೊಡ್ಡ ಹೊಸೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿಯ ನಿರ್ಮಾಣದ 11 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಪಿಡಬ್ಲ್ಯೂಡಿ ಎಇಇ ಜಯಂತ್, ಜಿ.ಪಂ ಎಇಇ ಮಂಜುನಾಥ್, ಬಿಇಒ ವೈ.ಕೆ ತಿಮ್ಮೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ತಾ.ಪಂ ಮಾಜಿ ಸದಸ್ಯರಾದ ಸೋಮಶೇಖರ್, ಮೋಹನ್ ರಾಜ್, ಕೊಪ್ಪ ಗ್ರಾ.ಪಂ ಅಧ್ಯಕ್ಷ ರೇಣುಕಾ ಸ್ವಾಮಿ ಮತ್ತು ಸದಸ್ಯರು, ಪಿಡಿಒ ಸತೀಶ್, ಆವರ್ತಿ ಗ್ರಾ.ಪಂ ಸದಸ್ಯರಾದ ಮಂಜು, ಮೋಹನ್, ಪಿಡಿಒ ಅಭಿ ಮಹಮ್ಮದ್, ಉದ್ಯಮಿ ಚಂದ್ರಶೇಖರ್, ದೊಡ್ಡ ಕಮರವಳ್ಳಿ ಗ್ರಾ.ಪಂ ಅಧ್ಯಕ್ಷ ಚಂದ್ರೇಗೌಡ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top