ಪಿರಿಯಾಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ನಡೆದ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಶಾಸಕ ಕೆ.ಮಹದೇವ್, ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಹಾಗು ಗಣ್ಯರು ಉದ್ಘಾಟಿಸಿದರು. 11/10/2021

ಪಿರಿಯಾಪಟ್ಟಣ: ಶಾಸಕನಾದ ನಂತರ ನಾನು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಿಸದ ವಿರೋಧಿಗಳು ನನ್ನ ವಿರುದ್ಧ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದು ಕಾರ್ಯಕರ್ತರು ಕಿವಿಕೊಡದಂತೆ ಶಾಸಕ ಕೆ.ಮಹದೇವ್ ಮನವಿ ಮಾಡಿದರು.
ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ತಾಲ್ಲೂಕು ಜಾತ್ಯಾತೀತ ಜನತಾದಳ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಶಾಸಕರು ಮಾತನಾಡಿದರು. ಹೋರಾಟದ ಮನೋಭಾವನೆಯಿಂದ ರಾಜಕೀಯಕ್ಕೆ ಬಂದ ನಾನು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ತಾಲ್ಲೂಕನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಅಭಿವದ್ಧಿಗೆ ಒತ್ತು ನೀಡಿದ್ದೇನೆ, ಹೆಚ್.ಡಿ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಗೆ ಒತ್ತು ನೀಡಿದ್ದು ಕಾರ್ಯಕರ್ತರು ಧೃತಿಗೆಡದೆ ಸಂಘಟಿತರಾಗಬೇಕು, ವಿರೋಧಿಗಳು ಪಕ್ಷದ ಕಾರ್ಯಕರ್ತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು ಕಾರ್ಯಕರ್ತರು ವದಂತಿಗಳಿಗೆ ಕಿವಿಗೊಡದೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಪಕ್ಷ ಬಲವರ್ಧನೆಗೆ ಸಹಕರಿಸುವಂತೆ ಕೋರಿದರು.
ನಾನು ಸ್ವಾಭಿಮಾನ ಮತ್ತು ಹೋರಾಟದ ಮನೋಭಾವವನ್ನು ಪಕ್ಕಕ್ಕೆ ಇಟ್ಟು ನನ್ನ ತಾಲೂಕಿನ ಅಭಿವೃದ್ಧಿಗಾಗಿ ಕಿರಿಯ ಸಚಿವರಲ್ಲಿಯೂ ಕೂಡ ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದೇನೆ. ಈ ಹಿಂದೆ ಇದ್ದ ಜನಪ್ರತಿನಿಧಿಗಳು ತಾಲೂಕಿನ ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ, ತಾತ್ಸಾರ ವಹಿಸಿರುವುದರಿಂದ ಇಂದಿಗೂ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಇದನ್ನು ನೀಗಿಸುವಲ್ಲಿ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಆದರೆ ಹಿಂದಿನ ಸರ್ಕಾರದ ಅನುದಾನ ಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದಾಗಿ ಪ್ರತಿಪಕ್ಷದವರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಈ ವಿಷಯವಾಗಿ ಯಾವುದೇ ಸಂದರ್ಭದಲ್ಲಿಯೂ ನಾನು ಚರ್ಚೆಗೆ ಬರಲು ಸಿದ್ಧನಿದ್ದೇನೆ. ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ದನಿದ್ದೇನೆ ಎಂದು ಸವಾಲೆಸೆದರು.
ನಾನು ಅಧಿಕಾರದಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿಯೂ ಕೂಡ ತಾಲೂಕಿನ ಅಭಿವೃದ್ಧಿಗಾಗಿ ಇತರೆ ಸಚಿವರುಗಳ ಬಳಿ ಮನವಿ ಮಾಡಿ ಅನೇಕ ಯೋಜನೆಗಳಿಗೆ ಅನುದಾನ ಮಂಜೂರು ಮಾಡಿಸಿದ್ದೇನೆ. 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಾಜಿ ಶಾಸಕರು ಅಲ್ಪ ಅನುದಾನ ಮಂಜೂರು ಮಾಡಿಸಿ ಉದ್ಘಾಟನೆ ಮಾಡಿದರು. ಅದನ್ನು ರೂಪುರೇಷೆ ಮಾಡಿ ಪೂರ್ಣಗೊಳಿಸಲು ವಿಫಲರಾದರು. ಇದರಿಂದ ಕಾಮಗಾರಿಯು ಅರ್ಧಕ್ಕೆ ನಿಂತು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದನ್ನು ಮನಗಂಡು ಸಚಿವರು ಗಳೊಂದಿಗೆ ಚರ್ಚಿಸಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ.ಮುಂದಿನ ಡಿಸೆಂಬರ್ ತಿಂಗಳಿನಲ್ಲಿ 75 ಕೆರೆಗಳಿಗೆ ನೀರು ಮತ್ತು ಮಾರ್ಚ್ ಅಂತ್ಯಕ್ಕೆ ಸಂಪೂರ್ಣವಾಗಿ 150 ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಂಡಿದ್ದೇನೆ.
ನರೇಗಾ ಹಣದ ಕಾಮಗಾರಿಗಳಿಗೆ ನಾನು ಗುದ್ದಲಿಪೂಜೆ ನೆರವೇರಿಸುತ್ತಿದ್ದಾನೆ ಎಂದು ಟೀಕೆ ಮಾಡುತ್ತಿರುವ ಮಾಜಿ ಶಾಸಕರು ನಿಮ್ಮ ಆಡಳಿತದ ಅವಧಿಯಲ್ಲಿ ನರೇಗಾ ಹಣಕಾಸು ದುರುಪಯೋಗ ವಾಗಿರುವುದನ್ನು ನೆನಪಿಸಿಕೊಳ್ಳಬೇಕು.ಜೊತೆಗೆ ಗ್ರಾಮಪಂಚಾಯಿತಿಯ ನರೇಗಾ ಅನುದಾನವನ್ನು ಎಷ್ಟು ಬಳಸಿದ್ದೀರಾ ಎಂದು ಉತ್ತರ ನೀಡಬೇಕು. ನಾನು ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ವಿರೋಧಪಕ್ಷದ ಆಡಳಿತದ ಸಚಿವರ ಮುಂದೆ ಮನವಿ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಗಳಿಗೂ ನರೇಗಾ ಹಣಕಾಸನ್ನು ನೀಡುವಂತೆ ಮನವೊಲಿಸಿ ಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ ಇದನ್ನು ಮಾಜಿ ಶಾಸಕರು ಅರಿತುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ನಾನು ಜೀವ ಇರುವವರೆಗೂ ಜೆಡಿಎಸ್ ನಲ್ಲಿಯೇ ಇರುತ್ತೇನೆ :
ನಾನು ಪಕ್ಷಕ್ಕಾಗಿ ಕ್ಷಮಿಸು ಪ್ರಾಮಾಣಿಕವಾಗಿ ಶ್ರಮಿಸುವಂತೆ ನನ್ನ ಕಾರ್ಯಕರ್ತರು ಕೂಡ ಪಕ್ಷಕ್ಕೆ ನಿಷ್ಠೆಯಿಂದ ಇದ್ದಾರೆ ಅಂತ ನಾನು ಜೀವ ಇರುವವರೆಗೂ ಜೆಡಿಎಸ್ ಪಕ್ಷದಲ್ಲಿ ಇದರ ಬಗ್ಗೆ ಯಾರೊಬ್ಬರೂ ಕೂಡ ಅಪನಂಬಿಕೆ ಇಟ್ಟುಕೊಳ್ಳಬಾರದು. ಪಕ್ಷದ ಕಾರ್ಯಕರ್ತರು ದೇವರ ಸಮಾನವಾಗಿ ಕಾಣುತ್ತಿದ್ದು ಇವರಿಗೆ ದ್ರೋಹ ಮಾಡುವುದಿಲ್ಲ. ಇತರರು ಹೇಳುವ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಪಕ್ಷದ ಸಂಘಟನೆಗೆ ಬದ್ಧರಾಗಿ ಕಾರ್ಯಕರ್ತರು ಮುಂದಿನ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು.

ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನೇದಿನೆ ಹೆಚ್ಚುತ್ತಿರುವುದರಿಂದ ಕೂಲಿ ಕಾರ್ಮಿಕರು, ಬಡವರು, ರೈತರು ಹಾಗೂ ಮಧ್ಯಮ ವರ್ಗದ ಜನರು ಜೀವನ ನಡೆಸುವುದೇ ದುಸ್ಸಾಹಸವಾಗಿದೆ, ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದಾಗ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ, ಪ್ರಾದೇಶಿಕ ಪಕ್ಷಗಳಿಗೆ ಇರುವ ಶಕ್ತಿ ರಾಷ್ಟ್ರೀಯ ಪಕ್ಷಗಳಿಗೆ ಇಲ್ಲ ಎಂಬುದು ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಸಾಬೀತಾಗಿದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಹೊರಗಿಟ್ಟು ಸಂಪೂರ್ಣ ಬಹುಮತದೊಂದಿಗೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತರಾಗಬೇಕು, ಶಾಸಕ ಕೆ.ಮಹದೇವ್ ಅವರು ವಿರೋಧ ಪಕ್ಷದ ಶಾಸಕರಾಗಿದ್ದರೂ ಸರ್ಕಾರಕ್ಕೆ ಒತ್ತಡ ಹೇರಿ ಅನುದಾನ ಮಂಜೂರು ಮಾಡಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ಜನಪ್ರಿಯ ಶಾಸಕರಾಗಿ ಹೊರಹೊಮ್ಮಿದ್ದಾರೆ ಎಂದು ಶ್ಲಾಘಿಸಿ ರಾಜ್ಯದಲ್ಲಿ ಮತ್ತೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಪಕ್ಷ ಸಂಘಟನೆ ಬಲಪಡಿಸುವ ಕೆಲಸವಾಗಬೇಕಿದ್ದು ಮೈಸೂರು ಜಿಲ್ಲೆಯಿಂದ ಅತಿಹೆಚ್ಚು ಜೆಡಿಎಸ್ ಶಾಸಕರನ್ನು ಗೆಲ್ಲಿಸಿಕೊಡುವ ಕೆಲಸವಾಗಬೇಕಿದೆ, ಅಲ್ಲದೆ ತಾಲೂಕಿನಲ್ಲಿಯೂ ಕೆ.ಮಹದೇವ್ ರವರಿಗೆ ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳನ್ನು ನೀಡಿ ಶಾಸಕರಾಗಿ ಆಯ್ಕೆ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ತಿಳಿಸಿದರು.

ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮಾತನಾಡಿ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ನಮ್ಮ ತಂದೆಯವರ ಸೋಲಿಗೆ ವಿರೋಧಿಗಳ ಅಪಪ್ರಚಾರ ಕಾರಣವಾಗಿದ್ದು ಈಗಲೂ ಸಹ ನಾವು ಜೆಡಿಎಸ್ ಪಕ್ಷ ತೊರೆಯುತ್ತೇವೆ ಎಂದು ಹಬ್ಬಿಸುತ್ತಿದ್ದು ಕಾರ್ಯಕರ್ತರು ಅವರ ಮಾತಿಗೆ ಕಿವಿಗೊಡಬಾರದು, ನಾವೆಲ್ಲೂ ಹೋಗುವುದಿಲ್ಲ ಜೆಡಿಎಸ್ ಪಕ್ಷದಲ್ಲೇ ಇರುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ ಮಾತನಾಡಿ ಜನತಾ ಪರಿವಾರಕ್ಕೆ ಸುದೀರ್ಘ ರಾಜಕೀಯ ಇತಿಹಾಸವಿದ್ದು ಕಾರ್ಯಕರ್ತರೆ ಪಕ್ಷದ ಆಸ್ತಿಯಾಗಿದ್ದಾರೆ, ತಾಲ್ಲೂಕಿನ ಸಾಮಾನ್ಯ ವ್ಯಕ್ತಿಯೂ ಸಹ ಸಮಸ್ಯೆ ಸಂಬಂಧ ಶಾಸಕರನ್ನು ನೇರವಾಗಿ ಸಂಪರ್ಕಿಸುವ ವ್ಯಕ್ತಿತ್ವ ಶಾಸಕ ಕೆ.ಮಹದೇವ್ ಅವರದ್ದಾಗಿದೆ ಎಂದರು.

ಇದೆ ಸಂದರ್ಭ ಜೆಡಿಎಸ್ ರಾಜ್ಯ ಸಮಿತಿ ಸದಸ್ಯೆ ನಜ್ಮಾನಜೀರ್ ಚಿಕ್ಕನೇರಳೆ ರವರು ಪಂಚರತ್ನ ಯೋಜನೆಯನ್ನು ಸಭಿಕರಿಗೆ ವಿವರಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ಜೆಸಿಬಿ ಕೆಂಪಣ್ಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆಯ 150 ಕ್ಕಿಂತ ಹೆಚ್ಚು ಮುಖಂಡರು ಶಾಸಕ ಕೆ.ಮಹದೇವ್ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾದರು.

ಈ ಸಂದರ್ಭ ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಉಪಾಧ್ಯಕ್ಷೆ ನಾಗರತ್ನ ಮತ್ತು ಸದಸ್ಯರು, ಮೈಮುಲ್ ನಿರ್ದೇಶಕ ಎಚ್.ಡಿ ರಾಜೇಂದ್ರ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ವಿ ತಿಮ್ಮೇಗೌಡ, ನಿರ್ದೇಶಕ ಡಿ.ಎ ನಾಗೇಂದ್ರ, ಜಿಪಂ ಮಾಜಿ ಸದಸ್ಯರಾದ ಕೆ.ಎಸ್ ಮಂಜುನಾಥ್, ಶಿವಣ್ಣ, ತಾ.ಪಂ ಮಾಜಿ ಸದಸ್ಯರಾದ ಎ.ಟಿ ರಂಗಸ್ವಾಮಿ, ಟಿ.ಈರಯ್ಯ, ಮೋಹನ್ ರಾಜ್, ಮಲ್ಲಿಕಾರ್ಜುನ್, ಮುಖಂಡರಾದ ಆರ್.ಎಲ್ ಮಣಿ, ಜೆ.ಎಸ್ ನಾಗರಾಜ್, ವಿದ್ಯಾಶಂಕರ್, ಜವರಪ್ಪ, ಕೆ.ಕುಮಾರ್, ಪ್ರೀತಿಅರಸ್, ರಫೀಕ್ ಅಹ್ಮದ್, ಅನ್ಸರ್, ಕೇರಳ ಸುರೇಶ್, ರಘುನಾಥ್, ಚಂದ್ರಶೇಖರಯ್ಯ, ಮೈಲಾರಪ್ಪ, ಅಣ್ಣೇಗೌಡ, ನಾಗಯ್ಯ, ಬಿ.ಜೆ ದೇವರಾಜ್, ಮುಕೇಶ್, ಸೈಯದ್ ಇಲಿಯಾಸ್ ಸೇರಿದಂತೆ ಜೆಡಿಎಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top