ಸರ್ಕಾರದ ಕಾರ್ಯಕ್ರಮಗಳು ಕೇವಲ ಪ್ರಚಾರ ಮತ್ತು ನಾಮಕಾವಸ್ಥೆಗೆ ಸೀಮಿತವಾಗದೆ ಅಧಿಕಾರಿಗಳು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವಾಗಬೇಕಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು. 16/10/2021

ತಾಲ್ಲೂಕಿನ ಹಾರನಹಳ್ಳಿ ಹೋಬಳಿ ವ್ಯಾಪ್ತಿಯ ರಾಜನಬಿಳಗುಲಿ ಗ್ರಾಮದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಸಾರ್ವಜನಿಕರಿಗೆ ಸದುಪಯೋಗವಾಗಲೆಂದು ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಆಯೋಜಿಸಿದ ಮೇಲೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳೇ ಬರದೇ ಹೋದರೆ ಏನು ಪ್ರಯೋಜನ, ಒಂದೇ ದಿನ ಜಿಲ್ಲೆಯಾದ್ಯಂತ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಜಿಲ್ಲಾಧಿಕಾರಿಗಳಿಗೆ ಎಲ್ಲ ಸ್ಥಳಗಳಿಗೂ ಭೇಟಿ ನೀಡಲು ಕಷ್ಟವಾಗುತ್ತದೆ, ಸರ್ಕಾರದವರು ಸಹ ಕೇವಲ ಕಾರ್ಯಕ್ರಮ ಜಾರಿ ಮಾಡಿ ಸಾರ್ವಜನಿಕರಿಗೆ ಟೋಪಿ ಹಾಕುವ ಕೆಲಸ ಮಾಡಬಾರದು, ತಾಲೂಕಿಗೆ ಶಾಸಕರೆ ಪ್ರಥಮ ಜನಪ್ರತಿನಿಧಿಯಾದ್ದರಿಂದ ನಾವುಗಳು ಕಾರ್ಯಕ್ರಮಕ್ಕೆ ಹೋಗಿ ಸಾರ್ವಜನಿಕರ ಕುಂದುಕೊರತೆಗಳನ್ನು ಅಧಿಕಾರಿಗಳೊಂದಿಗೆ ಆಲಿಸಿ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡುವುದರಿಂದ ಶಾಸಕರ ನಡೆ ಹಳ್ಳಿಯ ಕಡೆ ಎಂಬ ಶೀರ್ಷಿಕೆ ನೀಡಬಹುದಿತ್ತು, ಈ ವಿಚಾರವಾಗಿ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ತಿಳಿಸಿದರು. ಕಾರ್ಯಕ್ರಮ ನಡೆಯುವ ಗ್ರಾಮಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳು ಬಂದು ಸಮಸ್ಯೆ ಆಲಿಸುವುದರಿಂದ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಮಾಡುವಾಗ ವಿಳಂಬ ನೀತಿ ಅನುಸರಿಸದೇ ಶೀಘ್ರ ಸಮಸ್ಯೆ ಬಗೆಹರಿಸುವಂತೆ ತಿಳಿಸಿ ಕಾರ್ಯಕ್ರಮಕ್ಕೆ ಗೈರಾದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಹಾಗೂ ಆರ್ ಡಬ್ಲ್ಯುಎಸ್ ಎಇಇ ಪ್ರಭು ಅವರಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.

ತಹಸೀಲ್ದಾರ್ ಕೆ.ಚಂದ್ರಮೌಳಿ ಮಾತನಾಡಿ ಗ್ರಾಮದಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ಆಯೋಜಿಸಿದ್ದು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.

ಇದೇ ವೇಳೆ ರಾಜನಬಿಳುಗೂಲಿ ಗ್ರಾಮದ ಸರ್ಕಾರಿ ಶಾಲೆಯ ನೂತನ ಕೊಠಡಿಗಳು, ಡಾ.ಬಿ.ಆರ್ ಅಂಬೇಡ್ಕರ್ ಭವನ ಹಾಗೂ ಅಂಗನವಾಡಿ ಕೇಂದ್ರದ ಉದ್ಘಾಟನೆ ಮತ್ತು ಗ್ರಾಮ ಪರಿಮಿತಿಯಲ್ಲಿ ರಸ್ತೆ ನಿರ್ಮಾಣಕ್ಕೆ ಶಾಸಕರು ಚಾಲನೆ ನೀಡಿದರು.

ತಾಲ್ಲೂಕಿನ ಹಾರನಹಳ್ಳಿ ಹೋಬಳಿಯ ರಾಜನಬಿಳಗುಲಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್ ಅವರು ವಿವಿಧ ಯೋಜನೆಯ ಅರ್ಹ ಫಲಾನುಭವಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದರು.

ಈ ಸಂದರ್ಭ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಹಲಗನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಗೀತಾಮಹದೇವ್, ಉಪಾಧ್ಯಕ್ಷ ಶಫೀರ್ ಆಹಮದ್ ಮತ್ತು ಸದಸ್ಯರು, ಬಿಇಒ ವೈ.ಕೆ ತಿಮ್ಮೇಗೌಡ, ಉಪ ತಹಸೀಲ್ದಾರ್ ಎನ್.ಕೆ ಪ್ರದೀಪ್, ಗ್ರಾಮ ಲೆಕ್ಕಿಗರಾದ ನವೀನ್ ರಾವ್, ಪ್ರದೀಪ್, ಪಿಡಬ್ಲ್ಯೂಡಿ ಎಇಇ ಜಯಂತ್, ಜಿ.ಪಂ ಎಇಇ ಮಂಜುನಾಥ್, ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಸಿಡಿಪಿಒ ಕುಮಾರ್, ನಿರ್ಮಿತಿ ಕೇಂದ್ರದ ರಕ್ಷಿತ್, ಚೆಸ್ಕಾಂ ಎಇಇ ಕುಮಾರ್, ಮೀನುಗಾರಿಕೆ ಇಲಾಖೆಯ ಶಿವರಂಜನ್, ರೇಷ್ಮೆ ಇಲಾಖೆಯ ಸಿದ್ಧರಾಜು, ಜೆಡಿಎಸ್ ರಾಜ್ಯ ಸಮಿತಿ ಸದಸ್ಯೆ ನಜ್ಮಾ ನಜೀರ್, ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು, ಗ್ರಾಮದ ಮುಖಂಡರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top