
ಪಿರಿಯಾಪಟ್ಟಣ : ಗ್ರಾಮ ಠಾಣಾ ವ್ಯಾಪ್ತಿಯ ಆಸ್ತಿ ಗಡಿ ಗುರುತಿಸಲು ಸ್ವಮಿತ್ವ ಯೋಜನೆ ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಹಾಗೂ ದೊಡ್ಡಬೇಲಾಳು ಗ್ರಾಮ ಪಂಚಾಯತ್ ನಲ್ಲಿ ಸ್ವಮಿತ್ವ ಯೋಜನೆಯಡಿ ಡ್ರೋನ್ ಬಳಸಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಗ್ರಾಮಾಂತರ ಪ್ರದೇಶದ ಜನರು ತಮ್ಮ ಆಸ್ತಿ ಹದ್ದುಬಸ್ತು ಗುರುತಿಸಿಕೊಳ್ಳಲು ಆಗುತ್ತಿದ್ದ ಸಮಸ್ಯೆಯನ್ನು ಮನಗಂಡು ಕೇಂದ್ರ ಸರ್ಕಾರ ಸ್ವಮಿತ್ವ ಯೋಜನೆ ಜಾರಿಗೆ ತಂದು ಡ್ರೋಣ್ ಮೂಲಕ ಸರ್ವೆ ಕಾರ್ಯ ನಡೆಸಿ ಆಸ್ತಿ ಅಳತೆಯ ಮಾಹಿತಿ ನೀಡಲಾಗುತ್ತಿದೆ ಎಂದರು.
ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಮಾತನಾಡಿ ಗ್ರಾಮ ಠಾಣಾ ವ್ಯಾಪ್ತಿಯ ಸರ್ವೆ ನಂಬರ್ ಗಳಲ್ಲಿ ಐದಕ್ಕಿಂತ ಹೆಚ್ಚಿನ ಮನೆಗಳಿದ್ದು ಜನರು ವಾಸ ಮಾಡುತ್ತಿದ್ದು ಅವರಿಗೆ ತಮ್ಮ ಸ್ವತ್ತಿನ ಮಾಹಿತಿ ಪಡೆದುಕೊಳ್ಳಲು ಸ್ವಮಿತ್ವ ಯೋಜನೆ ಸಹಕಾರಿಯಾಗಲಿದೆ ಎಂದರು.
ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ ಮಾತನಾಡಿ ಕಂದಾಯ, ಭೂಮಾಪನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದೊಂದಿಗೆ ಸ್ವಮಿತ್ವ ಯೋಜನೆಯಡಿ ಸರ್ವೆ ಕಾರ್ಯ ವೈಜ್ಞಾನಿಕವಾಗಿ ಡ್ರೋನ್ ಮೂಲಕ ನಡೆಯುವುದರಿಂದ ತಮ್ಮ ಮನೆಯ ಅಳತೆ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ ದೊಡ್ಡಬೇಲಾಳು ಗ್ರಾಮದಲ್ಲಿ ನೂತನವಾಗಿ 12 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನಕ್ಕೆ ಶಾಸಕರು ಚಾಲನೆ ನೀಡಿದರು.

ಈ ಸಂದರ್ಭ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕಂಪಲಾಪುರ ಗ್ರಾ.ಪಂ ಅಧ್ಯಕ್ಷೆ ರಾಣಿ, ಸದಸ್ಯರಾದ ಮಮತಾ, ಸುಮ, ಪ್ರತಿಭಾ, ಕವಿತಾ, ರಮ್ಯಾ, ನಾಗರಾಜ್, ಪಿಎಸಿಸಿಎಸ್ ಅಧ್ಯಕ್ಷ ಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಲಕ್ಷ್ಮಣ್, ಜಯಣ್ಣ, ಕಾರ್ಯದರ್ಶಿ ಸುಷ್ಮಾ ಮತ್ತು ಸಿಬ್ಬಂದಿ, ದೊಡ್ಡಬೇಲಾಳು ಗ್ರಾ.ಪಂ ಅಧ್ಯಕ್ಷೆ ಆಸಿಯಾಖಾನಂ, ಉಪಾಧ್ಯಕ್ಷೆ ಗಾಯಿತ್ರಿ ಮತ್ತು ಸದಸ್ಯರು, ಮುಖಂಡರಾದ ಸುನಿತ ಮಂಜುನಾಥ್, ಬಸವರಾಜೇಅರಸ್, ಬಿಳಿಯಯ್ಯ, ಮಹದೇವ್, ಶಿವಣ್ಣ, ಪಿಡಿಒ ರವಿಕುಮಾರ್, ಸಿಬ್ಬಂದಿ ದೇವರಾಜ್ ಮತ್ತು ಗ್ರಾಮಸ್ಥರು ಹಾಜರಿದ್ದರು.