
ಪಿರಿಯಾಪಟ್ಟಣ: ಕನ್ನಡ ನಾಡಿನ ಗ್ರಾಮೀಣ ಸೊಡಗನ್ನು ಕಾವ್ಯಗಳ ಮೂಲಕ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಕುವೆಂಪು ಅವರು ರಚಿಸಿರುವ ನಾಡಗೀತೆಯಲ್ಲಿ ಕನ್ನಡ ನಾಡಿನ ಸಂಪೂರ್ಣ ಇತಿಹಾಸದ ಮಾಹಿತಿಯಿದೆ, ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಕುವೆಂಪು ಅವರ ಜೀವನ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಬಿಇಒ ವೈ.ಕೆ ತಿಮ್ಮೇಗೌಡ ಅವರು ಮಾತನಾಡಿ ಸರ್ವರಿಗೂ ಸಮಪಾಲು ಮತ್ತು ಸಮಬಾಳ್ವೆಯ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದ ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ರಚಿಸಿ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿ ಕರ್ನಾಟಕಕ್ಕೆ ಹಿರಿಮೆ ತಂದರು ಎಂದರು.
ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಮಾತನಾಡಿ ಕನ್ನಡ ನಾಡು ನುಡಿಗೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರವಾಗಿದೆ, ಪ್ರತಿಯೊಬ್ಬ ಕನ್ನಡಿಗರು ನಾಡು ನುಡಿ ಗೌರವಿಸುವ ಗುಣ ಬೆಳೆಸಿಕೊಳ್ಳುವಂತೆ ಕೋರಿದರು.
ಈ ಸಂದರ್ಭ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಎಸ್.ಆರ್ ದಿನೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಜಿ.ಪಂ ಎಇಇ ಮಂಜುನಾಥ್, ಪಿಡಬ್ಲ್ಯುಡಿ ಎಇಇ ಜಯಂತ್, ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ, ಎಂ.ಕೆ ಪ್ರಕಾಶ್, ಸಿಡಿಪಿಒ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಶಿರಸ್ತೇದಾರ್ ಗಳಾದ ಟ್ರಿಜಾ, ನಂದಕುಮಾರ್, ಉಪ ತಹಸೀಲ್ದಾರ್ ಗಳಾದ ಶುಭ, ಶಶಿಧರ್, ಗ್ರಾ.ಪಂ ಉಪಾಧ್ಯಕ್ಷ ರವಿಚಂದ್ರ ಬೂದಿತಿಟ್ಟು, ಸಮಾಜದ ಮುಖಂಡರಾದ ಅಶೋಕ್, ಮೋಹನ್, ಜಲೇಂದ್ರ, ರಾಜಶೇಖರ್ ಮತ್ತಿತರರಿದ್ದರು.