
ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆ ಶಾಸಕ ಕೆ ಮಹದೇವ್ ರವರು 1.2 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ತಾಲೂಕಿನ ಗಂಗೂರು ಗ್ರಾಮದಲ್ಲಿ 30 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಭಿವೃದ್ಧಿ ಕಾಮಗಾರಿ, ಹೆಗ್ಗಡಿ ಕೊಪ್ಪಲು ಗ್ರಾಮದಲ್ಲಿ16.52 ರೂ ವೆಚ್ಚದ ರಸ್ತೆ ನಿರ್ಮಾಣ ಅಭಿವೃದ್ಧಿ ಕಾಮಗಾರಿ, ಮಂಟಿ ಕೊಪ್ಪಲು ಗ್ರಾಮದಲ್ಲಿ 15.63 ಲಕ್ಷ ರೂ ವೆಚ್ಚದ ರಸ್ತೆ ನಿರ್ಮಾಣ ಅಭಿವೃದ್ಧಿ ಕಾಮಗಾರಿ, 10 ಲಕ್ಷ ರೂ ವೆಚ್ಚದಲ್ಲಿ ಮಕೊಡು ಗ್ರಾಮದಿಂದ ಕೆಎಂ ಕೊಪ್ಪಲು ಗ್ರಾಮದ ವರೆಗೆ ಹೋಗುವ ದಾರಿ ಮೆಟ್ಲಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿ, ಮಲಗಣಕೆರೆ ಗ್ರಾಮದಲ್ಲಿ 12 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಮತ್ತು ರಸ್ತೆ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕರು ಅಭಿವೃದ್ಧಿ ಕೆಲಸದ ವಿಚಾರದಲ್ಲಿ ಜಾತಿ ಮತ ನೋಡದೆ ರಾಜಕೀಯ ಮಾಡದೇ ಎಲ್ಲರನ್ನು ಸಮನಾಗಿ ಕಾಣುತ್ತಿದ್ದೇನೆ, ಮಾಜಿ ಶಾಸಕ ಕೆ ವೆಂಕಟೇಶ್ ಅವರ ನಿರ್ಲಕ್ಷದಿಂದ ತಾಲೂಕು ಹಿಂದುಳಿದಿದೆ, ನರೇಗಾ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ತಾಲೂಕಿನ ಅಭಿವೃದ್ಧಿ ಮಾಡದೆ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರು. ಇದರ ಪರಿಣಾಮ ತಾಲೂಕಿನ ಗ್ರಾಮೀಣ ಪ್ರದೇಶ ಅಭಿವೃದ್ಧಿಯಿಂದ ವಂಚಿತವಾಗಿದೆ. ನನ್ನ ಅವಧಿಯಲ್ಲಿ ನರೇಗಾ ಯೋಜನೆಯ ಸದ್ಬಳಕೆ ಮಾಡಿಕೊಂಡು ಪ್ರತಿ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದು ತಿಳಿಸಿದರು. ಮಕೊಡು ಗ್ರಾಮ ಪಂಚಾಯಿತಿಗೆ 1.5 ಕೋಟಿ ರೂ ಬಿಡುಗಡೆ ಮಾಡಿದ್ದು ಗಂಗೂರು ಬೋರೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶೀಘ್ರದಲ್ಲೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಅಣೆ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜವರಪ್ಪ ಮಾಜಿ ಸದಸ್ಯ ಮಲ್ಲಿಕಾರ್ಜುನ , ಎ ಇ ಇ ಪ್ರಭು, ಆಕಾಶ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ಪಿಡಿಒ ನಾಗಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳು ಹಾಗೂ ಮುಖಂಡರು ಹಾಜರಿದ್ದರು.