
ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆ ಶಾಸಕ ಕೆ ಮಹದೇವ್ ರವರು 1.97 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ತಾಲೂಕಿನ ದೊಡ್ಡಹರವೆ 1ನೇ ಬ್ಲಾಕ್ ನಲ್ಲಿ 70 ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಮೇಲ್ತೊಟ್ಟಿ ಕಾಮಗಾರಿ, ರಾಣಿ ಗೇಟ್ ಕೊಪ್ಪ – ಬೈಲಕುಪ್ಪೆ ರಸ್ತೆಮಾರ್ಗ ರಾಣಿ ಗೇಟ್ – ಲಾಮಾ ಕ್ಯಾಂಪ್ ರಸ್ತೆಯ 1 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ, ದೊಡ್ಡ ಹೊಸೂರು ಗ್ರಾಮದಲ್ಲಿ 10.60 ಲಕ್ಷ ರೂ ವೆಚ್ಚದ ಶಾಲಾ ಕೊಠಡಿಯ ಗುದ್ದಲಿ ಪೂಜೆ, ಕೊಪ್ಪ ಗ್ರಾಮದಲ್ಲಿ 16.50 ಲಕ್ಷ ರೂ ವೆಚ್ಚದ ಅಂಗನವಾಡಿ ಕೊಠಡಿ ಗುದ್ದಲಿ ಪೂಜೆ ಮತ್ತು ಕೋಗಿಲವಾಡಿ, ಮಾಗಳಿ ಹಾಗೂ ಪಾರೆ ಕೊಪ್ಪಲು ಗ್ರಾಮಗಳಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ನೂತನ ಕೊಠಡಿಯನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ನಾನು ಅಧಿಕಾರಕ್ಕೆ ಬಂದಮೇಲೆ ನರೇಗ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಪ್ರತಿ ಗ್ರಾಮ ಪಂಚಾಯಿತಿಗು ಕೋಟ್ಯಾಂತರ ರೂ. ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಮಾಡಿಸುತ್ತಿದ್ದೇನೆ. ಕಸಬಾ ಹೋಬಳಿಯ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಂಡಿದ್ದು, ಪ್ರತಿ ಗ್ರಾಮಕ್ಕೂ 1ಕೋಟಿ ರೂ ಗಿಂತಲೂ ಹೆಚ್ಚು ಅನುದಾನ ನೀಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಈ ಭಾಗದ ಜನರು ಆಶೀರ್ವಾದ ಮಾಡಿದಲ್ಲಿ ಈ ಹಿಂದೆ ಆಗದೆ ಇರುವ ಉಳಿದ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಶೀಲ್ದಾರ್ ಕೆ ಚಂದ್ರಮೌಳಿ, ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಟಿ ಈರಯ್ಯ,ಎ ಇ ಇ ಪ್ರಭು, ಕ್ಷೇತ್ರಶಿಕ್ಷಣಾಧಿಕಾರಿ ವೈಕೆ ತಿಮ್ಮೇಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತಿಮ್ಮೇಗೌಡ, ಸಿಡಿಪಿಒ ಕುಮಾರ್, ಪಿಡಿಒ ಮೋಹನ್, ಚೌತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೌರಿ, ಉಪಾಧ್ಯಕ್ಷರಾದ ರವಿಚಂದ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.