
ಗ್ರಾಮಾಂತರ ಪ್ರದೇಶದ ಜನರು ಸಾರ್ವಜನಿಕ ಸೇವೆಗಳಿಗಾಗಿ ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಗೆ ಬರುವುದನ್ನು ತಪ್ಪಿಸಲು ಹೋಬಳಿ ಕೇಂದ್ರಗಳಲ್ಲಿ ನಾಡಕಚೇರಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಹಾಗು ಬೆಟ್ಟದಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ನಾಡಕಚೇರಿ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಗ್ರಾಮಾಂತರ ಪ್ರದೇಶದ ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ತಾಲೂಕು ಕಚೇರಿ ಅವಲಂಬಿಸಬೇಕಾಗಿತ್ತು ಇದರಿಂದ ಹೆಚ್ಚು ಸಮಯ ಹಾಳಾಗುವುದಲ್ಲದೆ ತಾಲೂಕು ಅಧಿಕಾರಿಗಳು ಕೆಲಸ ಮಾಡಿಕೊಡಲು ನಿರ್ಲಕ್ಷ್ಯವಹಿಸಿದಾಗ ಆಕ್ರೋಶ ವ್ಯಕ್ತಪಡಿಸಿ ದೂರು ನೀಡುತ್ತಿದ್ದುದನ್ನು ಕ್ಷಣಾರ್ಧದಲ್ಲಿ ತಮಗೆ ಬೇಕಾದ ಮಾಹಿತಿ ಪಡೆಯಲು ನಾಡಕಚೇರಿಯಲ್ಲಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ, ಸರ್ಕಾರದ ಯಾವುದೇ ಅನುದಾನ ಸಿಗಬೇಕಾದರೆ ಪಕ್ಷಬೇಧ ಮರೆತು ತಾಲೂಕಿನ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ವಿವಿಧ ಇಲಾಖೆ ಸಚಿವರು ಹಾಗೂ ಮೇಲಧಿಕಾರಿಗಳಿಗೆ ಮನವಿ ಮಾಡಿ ಅನುದಾನ ತರಬೇಕಾಗಿದೆ ಎಂದರು.
ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಮಾತನಾಡಿ ಕಂದಾಯ ಇಲಾಖೆ ವತಿಯಿಂದ ಅಟಲ್ ಜಿ ಸೇವಾ ಕೇಂದ್ರದ ಮೂಲಕ ಸಾರ್ವಜನಿಕರ ಉಪಯೋಗಕ್ಕಾಗಿ ಸುಮಾರು 40 ಕ್ಕಿಂತ ಹೆಚ್ಚು ಸಾರ್ವಜನಿಕ ಸೇವೆಗಳು ಲಭ್ಯವಿದ್ದು ಸಾರ್ವಜನಿಕ ಸೇವೆಗಳನ್ನು ಕ್ಷಿಪ್ರಗತಿಯಲ್ಲಿ ನೀಡಲು ಸರ್ಕಾರ ಈಚೆಗೆ ನೂತನ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.
ಈ ವೇಳೆ 1000 ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ವಿಧವಾ ಮತ್ತು ಅಂಗವಿಕಲ ವೇತನ, ಪಿಂಚಣಿ ಸೇರಿದಂತೆ ವಿವಿಧ ಸವಲತ್ತುಗಳ ಅಂಗೀಕಾರದ ಆದೇಶ ಪತ್ರ ವಿತರಣೆ ಮಾಡಿದರು.
ಇದೆ ವೇಳೆ ರಾವಂದೂರು ಗ್ರಾಮದಲ್ಲಿ ಕೆ. ಪಿ. ಎಸ್ ಶಾಲೆಗೆ ಎರಡು ಕೊಠಡಿ ನಿರ್ಮಾಣದ ಗುದ್ದಲಿಪೂಜೆ, ಎನ್ ಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿಯ ಉದ್ಘಾಟನೆ ಮತ್ತು ಬೆಟ್ಟದತುಂಗ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನ ಕೊಠಡಿಯನ್ನು ಉದ್ಘಾಟಿಸಿದರು.
ಈ ಸಂದರ್ಭ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಉಪ ತಹಸೀಲ್ದಾರ್ ಶುಭ, ಬಿಇಒ ವೈ.ಕೆ ತಿಮ್ಮೇಗೌಡ, ಗ್ರಾಪಂ ಅಧ್ಯಕ್ಷ ಆರ್.ಎಸ್ ವಿಜಯ್ ಕುಮಾರ್, ಉಪಾಧ್ಯಕ್ಷೆ ನೇತ್ರಾವತಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ರು, ಗ್ರಾ.ಪಂ ಸದಸ್ಯ ಕುಮಾರ, ಭಾರತಿ, ಮುಖಂಡರಾದ ಆರ್.ಎಲ್ ಮಣಿ, ಆರ್.ವಿ ನಂದೀಶ್, ಹೆಚ್.ಡಿ ವಿಜಯ್ ಕುಮಾರ್, ಶಿವರಾಧ್ಯ, ಪುರೋಹಿತರಾದ ಶ್ರೀಕಂಠಾರಾಧ್ಯ, ಮಹದೇವ, ರಘುನಾಥ್, ಕಂದಾಯಾಧಿಕಾರಿ ಶ್ರೀಧರ್ ವಿವಿಧ ಇಲಾಖೆ ಮೇಲಧಿಕಾರಿಗಳು ಹಾಗು ಗ್ರಾಮದ ಮುಖಂಡರು ಹಾಜರಿದ್ದರು.