
ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೈಟೆಕ್ ಬಸ್ ನಿಲ್ದಾಣವನ್ನು ಶಾಸಕ ಕೆ.ಮಹದೇವ್ ಉದ್ಘಾಟಿಸಿದರು.
ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ಹೈಟೆಕ್ ಬಸ್ ನಿಲ್ದಾಣ ಹಾಗೂ ಶೌಚಾಲಯ ನಿರ್ಮಿಸುವ ಗುರಿ ಇದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. ಕಂಪಲಾಪುರ ಗ್ರಾಮದಲ್ಲಿ 4.5 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೈಟೆಕ್ ಬಸ್ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿದರು, ಗ್ರಾಮಾಂತರ ಪ್ರದೇಶದ ಬಸ್ ನಿಲ್ದಾಣವಿಲ್ಲದ ಸ್ಥಳಗಳಲ್ಲಿ ಪ್ರಯಾಣಿಕರು ಬಿಸಿಲು ಮಳೆ ಎನ್ನದೆ ಬಸ್ ಗಾಗಿ ಕಾಯುತ್ತಿದ್ದುದನ್ನು ಮನಗಂಡು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ಹಾಗೂ ಶೌಚಾಲಯ ನಿರ್ಮಿಸುವ ಗುರಿಯೊಂದಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿ ಮತ್ತು ಸಚಿವರೊಂದಿಗೆ ಈಗಾಗಲೇ ವಿಷಯ ಚರ್ಚಿಸಿದ್ದು ಪ್ರಥಮವಾಗಿ ಕಂಪಲಾಪುರ ಗ್ರಾಮದಲ್ಲಿ ಹೈಟೆಕ್ ಬಸ್ ನಿಲ್ದಾಣ ಉದ್ಘಾಟಿಸಲಾಗಿದೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆ ವಿಸ್ತರಿಸಲಾಗುವುದು, ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ ದೀರ್ಘ ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳುವ ಜವಾಬ್ದಾರಿಯಿದೆ, ಸಾರ್ವಜನಿಕ ಆಸ್ತಿ ಬಗ್ಗೆ ನಿರ್ಲಕ್ಷ್ಯ ವಹಿಸದೆ ರಕ್ಷಿಸುವ ಕರ್ತವ್ಯ ನಮ್ಮೆಲ್ಲರದಾಗಬೇಕು, ಶಾಸಕನಾದ ನಂತರ ತಾಲೂಕಿನ ಪ್ರತಿ ಗ್ರಾಮಗಳಿಗೂ ಹಂತಹಂತವಾಗಿ ಅನುದಾನ ಮಂಜೂರು ಮಾಡಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ, ಒಂದೇ ಬಾರಿಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಈ ಹಿಂದೆ ತಾಲ್ಲೂಕಿನಲ್ಲಿ ಆಡಳಿತ ನಡೆಸಿದವರ ನಿರ್ಲಕ್ಷ್ಯತನದಿಂದ ಅಭಿವೃದ್ಧಿ ಕುಂಠಿತವಾಗಿದೆ, ವಿರೋಧ ಪಕ್ಷದ ಶಾಸಕನಾಗಿದ್ದರೂ ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಸಂಬಂಧಿಸಿದ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಿಗೆ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಅನುದಾನ ಮಂಜೂರು ಮಾಡಿಸಲಾಗಿದೆ, ನಾನು ಶಾಸಕನಾದ ನಂತರ ತಾಲ್ಲೂಕಿನಾದ್ಯಂತ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮುಂದಿನ ದಿನಗಳಲ್ಲಿಯೂ ಆಶೀರ್ವದಿಸಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡಲು ಸಹಕರಿಸುವಂತೆ ಕೋರಿದರು.
ಈ ಸಂದರ್ಭ ತಾಲ್ಲೂಕು ಪಂಚಾಯ್ತಿ ಇಒ ಸಿ.ಆರ್ ಕೃಷ್ಣಕುಮಾರ್, ಜಿಲ್ಲಾ ಪಂಚಾಯಿತಿ ಎಇಇ ಮಂಜುನಾಥ್, ಎಇ ಸುಭಾಷ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ರು, ಪಿಎಸಿಸಿಎಸ್ ಅಧ್ಯಕ್ಷ ಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಣಿ, ಉಪಾಧ್ಯಕ್ಷ ರಾಮಲಿಂಗಂ, ಸದಸ್ಯರಾದ ನಾಗರಾಜ್, ರವಿ, ಶ್ರೀಪತಿ, ಮಮತಾ, ಸುಮಾ, ಶೀಲಾ, ಮಂಜುನಾಥ್, ಚಂದ್ರಶೇಖರ್, ಪಿಡಿಒ ಪರಮೇಶ್ ಕಾರ್ಯದರ್ಶಿ ಸುಷ್ಮಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಲಕ್ಷ್ಮಣ್, ಜಯಣ್ಣ, ಮುಖಂಡರಾದ ಚಂದ್ರಪ್ಪ ಮತ್ತಿತರರಿದ್ದರು.