
ಪಿರಿಯಾಪಟ್ಟಣ: ತಾಲ್ಲೂಕು ಕಂದಾಯ ಮತ್ತು ಭೂಮಾಪನ ಇಲಾಖೆಯ 2022 ನೇ ವರ್ಷದ ದಿನಚರಿ ಡೈರಿ ಅನ್ನು ಶಾಸಕ ಕೆ.ಮಹದೇವ್ ಅವರು ವರ್ಚ್ಯುಯಲ್ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿ ಶುಭಕೋರಿದರು.ಈ ವೇಳೆ ಶಾಸಕ ಕೆ.ಮಹದೇವ್ ಅವರು ಮಾತನಾಡಿ ಕಂದಾಯ ಮತ್ತು ಭೂಮಾಪನ ಇಲಾಖೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಎರಡೂ ಇಲಾಖೆಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದಾಗ ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯಲಿದೆ ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಎರಡು ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿ ನೂತನ ವರ್ಷ ಎಲ್ಲರಿಗೂ ಒಳಿತಾಗಲಿ ಎಂದು ಶುಭ ಕೋರಿದರು.
ಭೂಮಾಪನ ಕಾರ್ಯನಿರ್ವಾಹಕ ನೌಕರರ ಸಂಘದ ಮೈಸೂರು ವಿಭಾಗೀಯ ಉಪಾಧ್ಯಕ್ಷ ರಾದ ಎಂ.ಕೆ ಪ್ರಕಾಶ್ ಅವರು ಮಾತನಾಡಿ ತಾಲ್ಲೂಕು ಆಡಳಿತದ ಸಹಕಾರದೊಂದಿಗೆ ಕಂದಾಯ ಮತ್ತು ಭೂಮಾಪನ ಇಲಾಖೆ ಸಹಭಾಗಿತ್ವದಲ್ಲಿ ದಾನಿಗಳ ಸಹಕಾರದಿಂದ ನೂತನ ವರ್ಷದ ಡೈರಿ ಬಿಡುಗಡೆ ಮಾಡುತ್ತಿದ್ದು ಹಿಂದಿನ ವರ್ಷದ ಸಂಕಷ್ಟಗಳು ದೂರವಾಗಿ ನೂತನ ವರ್ಷ ಸರ್ವರಿಗೂ ಶುಭವಾಗಲಿ ಎಂದರು.
ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಮಾತನಾಡಿ ತಾಲ್ಲೂಕು ಕಂದಾಯ ಮತ್ತು ಭೂಮಾಪನ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಮಾಹಿತಿಯುಳ್ಳ ಡೈರಿ ಉತ್ತಮವಾಗಿ ಮುದ್ರಿತವಾಗಿದೆ ಎಂದು ಶುಭ ಕೋರಿದರು.
ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ ಅವರು ಮಾತನಾಡಿ ತಾಲ್ಲೂಕಿನಲ್ಲಿ ಕಂದಾಯ ಮತ್ತು ಭೂಮಾಪನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಲಾಗುತ್ತಿದೆ ಎಂದು ಹೇಳಿ ನೂತನ ವರ್ಷ ಸರ್ವರಿಗೂ ಒಳಿತಾಗಲಿ ಎಂದರು.
ಈ ಸಂದರ್ಭ ಶಿರಸ್ತೆದಾರ್ ನಂದಕುಮಾರ್, ಉಪತಹಶೀಲ್ದಾರ್ ಗಳಾದ ಶುಭ, ಶಶಿಧರ್, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎನ್.ಕೆ ಪ್ರದೀಪ್, ನಿರ್ದೇಶಕರಾದ ಗಿರೀಶ್, ನಿರಂಜನ್ ಮೇ೦ದ್ರಗುತ್ತಿ, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಎಸ್ ನವೀನ್ ರಾವ್, ಉಪನೋಂದಣಾಧಿಕಾರಿ ಮಧು ಹಾಗೂ ಕಂದಾಯ ಇಲಾಖೆಯ ತಾಲ್ಲೂಕಿನ ವಿವಿಧೆಡೆಯ ಗ್ರಾಮ ಲೆಕ್ಕಿಗರು ಮತ್ತು ಭೂಮಾಪನ ಇಲಾಖೆ ಸಿಬ್ಬಂದಿ ಹಾಜರಿದ್ದರು.