ಪಿರಿಯಾಪಟ್ಟಣ ಕಸಬಾ ಹೋಬಳಿ ವ್ಯಾಪ್ತಿಯ ವಿವಿಧ ಪಿಂಚಣಿ ಫಲಾನುಭವಿಗಳಿಗೆ ಶಾಸಕ ಕೆ.ಮಹದೇವ್ ಅವರು ಆದೇಶ ಪತ್ರ ವಿತರಿಸಿದರು 03/02/2022

ಪಿರಿಯಾಪಟ್ಟಣ: ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಶಾಸಕ ಕೆ.ಮಹದೇವ್ ಸೂಚಿಸಿದರು.ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ನಡೆದ ಕಸಬಾ ಹೋಬಳಿಯ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಕಸಬಾ ಹೋಬಳಿ ಸೇರಿದಂತೆ ರಾವಂದೂರು ಬೆಟ್ಟದಪುರ ಹಾಗೂ ಹಾರನಹಳ್ಳಿ ವ್ಯಾಪ್ತಿಯ 5 ಸಾವಿರ ಅರ್ಹ ಫಲಾನುಭವಿಗಳನ್ನು ಗುರುತಿಸಿ ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವಾ ವೇತನಗಳನ್ನು ನೀಡಲು ಸಂಬಂಧಿಸಿದ ಇಲಾಖೆಗಳ ಮೂಲಕ ಅಗತ್ಯ ಕ್ರಮ ಕೈಗೊಂಡು ಈಗಾಗಲೇ ಆದೇಶ ಪತ್ರ ವಿತರಿಸಲಾಗಿದೆ, ಸರ್ಕಾರದ ಯೋಜನೆಗಳನ್ನು ಪಡೆಯಲು ಫಲಾನುಭವಿಗಳು ಸರ್ಕಾರಿ ಕಚೇರಿಗಳಿಗೆ ಹೋಗುವ ಅಲೆದಾಟ ತಪ್ಪಿಸಲು ಗ್ರಾಮ ಲೆಕ್ಕಾಧಿಕಾರಿಗಳು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಧಾವಿಸಿ ಸೂಕ್ತ ಮಾಹಿತಿ ಪಡೆದು ನವೋದಯ ಯೋಜನೆಯ ಆಪ್ ನಲ್ಲಿ ದಾಖಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ, ಇದನ್ನು ಸಹಿಸದ ವಿರೋಧಿಗಳು ನನ್ನ ವಿರುದ್ಧ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದು ಇದಕ್ಕೆಲ್ಲಾ ಅಭಿವೃದ್ಧಿಯ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇನೆ, ನಾನು ಶಾಸಕನಾಗಿ ಆಯ್ಕೆಯಾಗಲು ಸಾರ್ವಜನಿಕರೊಂದಿಗೆ ಇದ್ದ ಉತ್ತಮ ಒಡನಾಟ ಕಾರಣವಾಗಿದ್ದು ಸರ್ಕಾರದ ಯೋಜನೆಗಳ ಸಮರ್ಪಕ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ತಹಸೀಲ್ದಾರ್ ಕೆ.ಚಂದ್ರಮೌಳಿ ರವರು ಮಾತನಾಡಿ ತಾಲ್ಲೂಕಿನಾದ್ಯಂತ ಗ್ರಾಮ ಸಹಾಯಕರು ಮನೆ ಮನೆಗೆ ತೆರಳಿ ನವೋದಯ ಆ್ಯಪ್ ಮೂಲಕ ಸರ್ಕಾರದ ವಿವಿಧ ಪಿಂಚಣಿ ವ್ಯಾಪ್ತಿಗೆ ಬರುವ ಅರ್ಹ ಫಲಾನುಭವಿಗಳನ್ನು ಗುರುತಿಸಲು ಸೂಚನೆ ನೀಡಲಾಗಿದ್ದು ಸೂಕ್ತ ಮಾಹಿತಿ ನೀಡುವ ಮೂಲಕ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು. ಈ ವೇಳೆ ಕಸಬಾ ಹೋಬಳಿ ವ್ಯಾಪ್ತಿಯ 500ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರ ಹಾಗೂ ಕೊವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಸರ್ಕಾರದ ಪರಿಹಾರ ಧನದ ಚೆಕ್ ಅನ್ನು ಶಾಸಕರು ವಿತರಿಸಿದರು.

ಈ ಸಂದರ್ಭ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ರು, ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಮುಖ್ಯಾಧಿಕಾರಿ ಎ.ಟಿ ಪ್ರಸನ್ನ, ಸದಸ್ಯರಾದ ಪಿ.ಸಿ ಕೃಷ್ಣ, ಕೆ.ಮಹೇಶ್, ನಾಮನಿರ್ದೇಶಿತ ಸದಸ್ಯ ಶಿವರಾಮೆಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ವಿ ತಿಮ್ಮೇಗೌಡ, ಜಿ.ಪಂ ಮಾಜಿ ಸದಸ್ಯ ಕೆ.ಸಿ ಜಯಕುಮಾರ್, ತಾ.ಪಂ ಮಾಜಿ ಸದಸ್ಯ ಟಿ.ಈರಯ್ಯ, ರಾಮಚಂದ್ರ, ಶಿರಸ್ತೆದಾರ್ ಟ್ರಿಜಾ, ಕಂದಾಯ ಅಧಿಕಾರಿ ಪಾಂಡುರಂಗ, ಗ್ರಾಮ ಲೆಕ್ಕಿಗರಾದ  ಅಶಿಮಾ, ಸಿದ್ಧರಾಜು, ಸೋಮಶೇಖರ್, ಶಶಾಂಕ್, ಸ್ವಾತಿ, ರಮ್ಯಾ, ಸುಶ್ಮಿತಾ ಮತ್ತಿತರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top