ಪಿರಿಯಾಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಎಂಡಿಸಿಸಿ ಬ್ಯಾಂಕ್ ಕಟ್ಟಡ ಕಾಮಗಾರಿಗೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಚಾಲನೆ ನೀಡಿದರು, ಶಾಸಕ ಕೆ.ಮಹದೇವ್, ಎಂಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಹರೀಶ್ ಗೌಡ, ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಇದ್ದರು. 04/02/2022

ಪಿರಿಯಾಪಟ್ಟಣ: ಅಭಿವೃದ್ಧಿ ಪರ ಕೆಲಸ ಮಾಡುವವರ ವಿರುದ್ಧ ಷಡ್ಯಂತ್ರ ರೂಪಿಸಿ ದೂರು ನೀಡುವವರಿಗೆ ಸೊಪ್ಪು ಹಾಕುವುದಿಲ್ಲ ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತ ಸಹಕಾರ ನೀಡುವುದಾಗಿ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು. ಪಟ್ಟಣದಲ್ಲಿ 1.42 ಕೋಟಿ ವೆಚ್ಚದ ಎಂಡಿಸಿಸಿ ಬ್ಯಾಂಕ್ ನೂತನ ಕಟ್ಟಡ ಹಾಗೂ 80 ಲಕ್ಷ ವೆಚ್ಚದ ನಂದಿನಿ ಗೆಲಾಕ್ಸಿ ಹಾಗೂ ನಂದಿನಿ ಕೆಫೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಸಹಕಾರ ಕ್ಷೇತ್ರದಲ್ಲಿ ಅಭಿವದ್ಧಿ ಹಾಗೂ ರೈತಪರ ಉತ್ತಮ ಕೆಲಸ ನಿರ್ವಹಿಸಿದರೆ ಒಳ್ಳೆಯ ಹೆಸರು ಸಿಗುತ್ತದೆ ಈ ನಿಟ್ಟಿನಲ್ಲಿ ಎಂಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಜಿ.ಡಿ ಹರೀಶ್ ಗೌಡ ಹಾಗೂ ಮೈಮುಲ್ ಅಧ್ಯಕ್ಷ  ಪಿ.ಎಂ ಪ್ರಸನ್ನ ಅವರು ಜೋಡೆತ್ತಿನಂತೆ ಸಹಕಾರ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಶ್ಲಾಘನೀಯ, ರಾಜ್ಯದ 21 ಜಿಲ್ಲಾ ಸಹಕಾರ ಬ್ಯಾಂಕ್ ಮೂಲಕ ರೈತರಿಗೆ 22 ಸಾವಿರ ಕೋಟಿ ಸಾಲ ನೀಡಲು ಕ್ರಮ ಕೈಗೊಂಡಿದ್ದು ಈ ನಿಟ್ಟಿನಲ್ಲಿ ಎಂಡಿಸಿಸಿ ಬ್ಯಾಂಕ್ ಈಗಾಗಲೇ ಶೇ.90 ರಷ್ಟು ಸಾಲ ವಿತರಿಸಿ ಲಾಭಾಂಶ ಹಾಗೂ ಸಾಲ ವಿತರಣೆಯಲ್ಲಿ ಮೊದಲ ಸ್ಥಾನದಲ್ಲಿದೆ, ಎಂದರು ರೈತರು ಸರ್ಕಾರದ ಬೆನ್ನೆಲಬಾಗಿದ್ದು ಅವರನ್ನು ಗೌರವಿಸಿ ಅಭಿವೃದ್ಧಿಗೆ ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಸರ್ಕಾರ ಯಾರ ಮನೆ ಬಾಗಿಲಿಗೂ ಸಹ ಅನುದಾನ ನೀಡುವುದಿಲ್ಲ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರೆ ಅನುದಾನ ಮಂಜೂರಾಗುತ್ತದೆ, ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಶಾಸಕ ಕೆ.ಮಹದೇವ್ ಅವರ ಕಾರ್ಯ ಶ್ಲಾಘನೀಯ ಇದನ್ನು ನೋಡಿ ಅಕ್ಕಪಕ್ಕದ ತಾಲ್ಲೂಕಿನ ಶಾಸಕರು ಹೊಟ್ಟೆಕಿಚ್ಚು ಪಡುವ ಬದಲು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

ಶಾಸಕ ಕೆ.ಮಹದೇವ್ ಅವರು ಮಾತನಾಡಿ ತಾಲ್ಲೂಕಿನ ಜನತೆಯ ಸಂಕಷ್ಟ ಹಾಗೂ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುವುದು ಶಾಸಕನಾದ ನನ್ನ ಕರ್ತವ್ಯವಾಗಿದ್ದು ನಮ್ಮ ಪಕ್ಷದ ಸರ್ಕಾರವಿಲ್ಲದಿದ್ದರೂ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ನೆರವಿನಿಂದ ಸಂಬಂಧಿಸಿದ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿ ಅನುದಾನ ಮಂಜೂರು ಮಾಡಿಸಿದ್ದು ಜನಪ್ರತಿನಿಧಿಯಾದವರು ನಾನು ಎಂಬ ಹುಂಬುತನ ಬಿಟ್ಟು ಕೆಲಸ ನಿರ್ವಹಿಸಿದರೆ ಜನಮಾಸದಲ್ಲಿ ಉಳಿಯಬಹುದು, ಚುನಾವಣೆ ಸಂದರ್ಭ ಮಾತ್ರ ರಾಜಕೀಯ ಸೀಮಿತ ಉಳಿದ ಸಂದರ್ಭ ಪಕ್ಷಾತೀತವಾಗಿ ಅಭಿವೃದ್ಧಿಯಷ್ಟೇ ಮೊದಲ ಗುರಿ ಎಂದರು.

ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮಾತನಾಡಿ ರೈತರ ಪರ ಕೆಲಸ ನಿರ್ವಹಿಸಲು ಸಹಕಾರ ಕ್ಷೇತ್ರ ಸಹಕಾರಿಯಾಗಿದ್ದು ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕರ್ತವ್ಯ ನಿರ್ವಹಿಸಿ ತಾಲ್ಲೂಕಿನಲ್ಲಿ ನೂತನವಾಗಿ 58 ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ 40 ಬಿಎಂಸಿ ಕಟ್ಟಡಗಳನ್ನು ನಿರ್ಮಿಸಿ 100 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ಇದೆ ವೇಳೆ ಪಿರಿಯಾಪಟ್ಟಣ ಪುರಸಭಾ ವ್ಯಾಪ್ತಿಯ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಮುಂಭಾಗ ಆಟೋ ಸ್ಟಾಂಡ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು

ಈ ಸಂದರ್ಭ ಎಂಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಅಪೆಕ್ಸ್ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಜಿ.ಡಿ ಹರೀಶ್ ಗೌಡ, ಮೈಮುಲ್ ನಿರ್ದೇಶಕರಾದ ಸೋಮಶೇಖರ್, ಕೆ.ಜಿ ಮಹೇಶ್, ಈರೇಗೌಡ, ಓಂಪ್ರಕಾಶ್, ಉಮಾಶಂಕರ್, ಹೆಚ್.ಡಿ ರಾಜೇಂದ್ರ, ಚಲುವರಾಜ್, ಸದಾನಂದ, ದ್ರಾಕ್ಷಾಯಿಣಿ, ನೀಲಾಂಬಿಕೆ, ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿ.ಎನ್ ರವಿ, ಮಂಜೇಗೌಡ, ಪ್ರಭಾಕರ್, ನಾಗಪ್ರಸಾದ್, ಸುಬ್ಬಯ್ಯ, ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ಉಪಾಧ್ಯಕ್ಷೆ ನಾಗರತ್ನ ಮತ್ತು ಸದಸ್ಯರು, ಕೆಡಬ್ಲ್ಯುಎಸ್ಎಸ್ ಬಿ ನಾಮ ನಿರ್ದೇಶಕ ಆರ್.ಟಿ ಸತೀಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ರು, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಜೇಗೌಡ, ಎಂಡಿಸಿಸಿ ಬ್ಯಾಂಕ್ ಮತ್ತು ಮೈಮುಲ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top