
ಪಿರಿಯಾಪಟ್ಟಣ: ದೂರದ ಊರುಗಳಿಗೆ ಹೋಗಿ ಪಡಿತರ ತರುವ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಪಡಿತರ ವಿತರಣಾ ಉಪ ಕೇಂದ್ರಗಳನ್ನು ತೆರೆಯಲು ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಆಹಾರ ಪಡಿತರ ವಿತರಣೆ ಉಪಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು ಪಡಿತರ ಪಡೆಯಲು ದೂರದ ಗ್ರಾಮಗಳಿಗೆ ಹೋಗುತ್ತಿದ್ದರಿಂದ ವಯೋವೃದ್ಧರು ಮಹಿಳೆಯರಿಗೆ ಆಗುತ್ತಿದ್ದ ಅನಾನುಕೂಲ ತಪ್ಪಿಸುವ ಉದ್ದೇಶದಿಂದ ಸಮೀಪದ ಗ್ರಾಮಗಳಲ್ಲಿಯೇ ಪಡಿತರ ವಿತರಣೆ ಉಪ ಕೇಂದ್ರವನ್ನು ಈಗಾಗಲೇ ತಾಲ್ಲೂಕಿನ ಹಲವೆಡೆ ತೆರೆದಿದ್ದು ಉಳಿದ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಇದರಿಂದ ಪಡಿತರ ಪಡೆಯಲು ದಿನವಿಡೀ ಕಾಯಬೇಕಾದ ಪರಿಸ್ಥಿತಿ ಇರುವುದಿಲ್ಲ ಎಂದರು.
ಜಲಜೀವನ ಮಿಷನ್ ಯೋಜನೆಯಡಿ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗುವುದು, ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ಕುಡಿಯುವ ನೀರು ಸರಬರಾಜಿಗೆ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 126 ಕೋಟಿ ಅನುದಾನದ ಮಂಜೂರಾತಿ ದೊರೆತಿದೆ, ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಅನುದಾನ ಮಂಜೂರಾಗಿದ್ದು ಪಕ್ಷಾತೀತವಾಗಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.
ಈ ಸಂದರ್ಭ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಚೌತಿ ಗ್ರಾ.ಪಂ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ರವಿಚಂದ್ರ ಬೂದಿತಿಟ್ಟು, ಕಸಬಾ ಪಿಎಸಿಸಿಎಸ್ ಅಧ್ಯಕ್ಷ ನಟರಾಜು, ಉಪಾಧ್ಯಕ್ಷೆ ರೇಖಾ ಸದಸ್ಯರಾದ ಪಿ.ಕೆ ಕುಮಾರ್, ಸಣ್ಣಪ್ಪ, ರಮೇಶ್, ಕಾರ್ಯದರ್ಶಿ ಪ್ರವೀಣ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಆಹಾರ ನಿರೀಕ್ಷಕ ಮಂಜುನಾಥ್, ಸಿಡಿಪಿಒ ಕುಮಾರ್, ಮುಖಂಡರಾದ ಹೆಚ್.ಬಿ ಸುರೇಶ್, ಗೋವಿಂದೇಗೌಡ, ರಾಮೇಗೌಡ, ಶಿವಣ್ಣ, ರಾಜೇಗೌಡ, ಸತೀಶ್, ಸಿರಾಜ್ ಮತ್ತಿತರಿದ್ದರು.