
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ತಾಲ್ಲೂಕಿನ ರೈತರು ಬೆಳೆದಿರುವ ಪೂರ್ಣಪ್ರಮಾಣದ ರಾಗಿಯನ್ನು ಕೊಂಡುಕೊಳ್ಳಲು ಮುಂದಾಗಬೇಕೆಂದು ಶಾಸಕ ಕೆ ಮಹದೇವ್ ತಿಳಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ 2021/22 ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಗಮ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ಖರೀದಿಸಲು ರಾಗಿ ಮತ್ತು ಭತ್ತ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಪ್ರತಿ ಕ್ವಿಂಟಲ್ ರಾಗಿಗೆ 3377 ರೂ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿದೆ ಆದರೆ ಕಳೆದ ಸಾಲಿಗೆ ಹೋಲಿಸಿದರೆ ಶೇಕಡ 60ರಷ್ಟು ಪ್ರಮಾಣದ ರಾಗಿ ಖರೀದಿ ಪ್ರಮಾಣವನ್ನು ಕಡಿಮೆ ಮಾಡಿದ್ದು ಇದು ಸರ್ಕಾರದ ಅವೈಜ್ಞಾನಿಕ ಕ್ರಮವಾಗಿದೆ ಖರೀದಿ ಪ್ರಮಾಣ ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು
ರೈತರು ಗುಣಮಟ್ಟದ ರಾಗಿಯನ್ನು ತರಬೇಕು ರಾಗಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂಬ ದೂರು ಕೇಳಿ ಬರುತ್ತಿದೆ ಇದಕ್ಕೆ ನೇರವಾಗಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಮಾತನಾಡಿ ಕಳೆದ ಸಾಲಿನಲ್ಲಿ 1,95,000 ಕ್ವಿಂಟಲ್ ರಾಗಿ ಖರೀದಿ ಮಾಡಲಾಗಿತ್ತು ಆದರೆ ಸರ್ಕಾರ ಪ್ರಸ್ತುತ ವರ್ಷ 96000 ಕ್ವಿಂಟಲ್ ಖರೀದಿ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಸಿಲ್ದಾರ್ ಚಂದ್ರಮೌಳಿ ಮತ್ತು ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿದರು.
ಕರ್ನಾಟಕ ರಾಜ್ಯ ನೀರು ಮತ್ತು ಒಳಚರಂಡಿ ನಿರ್ದೇಶಕ ಆರ್. ಟಿ ಸತೀಶ್ ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ್ ರಾಜ್ ಅರಸ್, ಟಿಎಪಿಸಿಎಂಎಸ್ ನಿರ್ದೇಶಕ ತಿಮ್ಮ ನಾಯಕ, ಆಹಾರ ನಿರೀಕ್ಷಕ ಸಣ್ಣಸ್ವಾಮಿ, ಅಧಿಕಾರಿಗಳಾದ ದಿವಾಕರ್ ಎಪಿಎಂಸಿ ಸಹಾಯಕ ಅಧಿಕಾರಿ ಚೆಲುವರಾಯ ಮತ್ತು ರೈತ ಮುಖಂಡರು ಹಾಜರಿದ್ದರು