ಪಿರಿಯಾಪಟ್ಟಣ: ವ್ಯವಸಾಯಕ್ಕೆ ಅಗತ್ಯವಿರುವ ರಸಗೊಬ್ಬರಗಳ ಬೆಲೆ ಏರಿಕೆಯಿಂದ ರೈತರಿಗೆ ಹೊರೆಯಾಗುತ್ತಿದ್ದು ಕೂಡಲೇ ರಾಜ್ಯ ಸರ್ಕಾರ ರಸಗೊಬ್ಬರಗಳ ದರ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಶಾಸಕ ಕೆ.ಮಹದೇವ್ ಒತ್ತಾಯಿಸಿದರು. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ರಸಗೊಬ್ಬರದ ಬೆಲೆ ಒಂದೂವರೆ ಪಟ್ಟಿನಷ್ಟು ಹೆಚ್ಚಳವಾಗಿರುವುದರಿಂದ ಕೃಷಿಯನ್ನೇ ನಂಬಿಕೊಂಡಿರುವ ಅನ್ನದಾತರು ತತ್ತರಿಸಿ ಹೋಗುತ್ತಿದ್ದಾರೆ ಎಂದು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ತಂಬಾಕು ಬೆಳೆಯನ್ನು ನೆಚ್ಚಿಕೊಂಡಿದ್ದು ತಂಬಾಕು ಮಂಡಳಿಯಿಂದ ಬೆಳೆಗಾರರಿಗೆ ನೀಡಲಾಗುತ್ತಿರುವ ರಸಗೊಬ್ಬರ ಕೆಲೆವೆಡೆ ಕಳಪೆಯದ್ದಾಗಿದೆ ಎಂದು ರೈತರಿಂದ ದೂರುಗಳು ಕೇಳಿಬರುತ್ತಿದ್ದು ಈ ಬಗ್ಗೆ ತಂಬಾಕು ಮಂಡಳಿಯ ಅಧಿಕಾರಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ರೈತರ ಹಿತ ಕಾಯಬೇಕು, ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗೆ ಪ್ರೋತ್ಸಾಹಕರ ವಾತಾವರಣ ನಿರ್ಮಾಣಗೊಂಡಿದೆ, ತಂಬಾಕು ಬೆಳೆ ನಾಟಿ ಕಾರ್ಯ ಪ್ರಗತಿಯಲ್ಲಿದ್ದು ಮುಂಗಾರು ಹಂಗಾಮಿನಲ್ಲಿ ಸುಮಾರು 25,750 ಹೆಕ್ಟೇರ್ ತಂಬಾಕು10,450 ಹೆಕ್ಟೇರ್ ಮುಸುಕಿನ ಜೋಳ 8,400 ಹೆಕ್ಟೇರ್ ಭತ್ತ ಮತ್ತು 800 ಹೆಕ್ಟೇರ್ ವಿವಿಧ ದ್ವಿದಳ ಧಾನ್ಯಗಳನ್ನು ಬೆಳೆಯಲು ಕೃಷಿ ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗಿದೆ, ತಾಲೂಕಿನಲ್ಲಿ ಈ ವರ್ಷ ಯಾವುದೇ ರಸಗೊಬ್ಬರಕ್ಕೆ ಕೊರತೆ ಆಗದಂತೆ ಸಂಬಂಧಿಸಿದ ಇಲಾಖೆಗಳ ವತಿಯಿಂದ ನಿಗಾ ವಹಿಸಿದ್ದು ರಸಗೊಬ್ಬರ ಮಾರಾಟ ಪರವಾನಿಗೆ ಹೊಂದಿರುವ ಖಾಸಗಿ ರಸಗೊಬ್ಬರ ಮಾರಾಟಗಾರರು ಹಾಗು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಸರಬರಾಜು ಸಂಸ್ಥೆಗಳಿಂದ ಹೆಚ್ಚಿನ ದಾಸ್ತಾನನ್ನು ಪಡೆಯಲು ಕ್ರಮ ವಹಿಸಲಾಗಿದೆ, ಕೃಷಿ ಇಲಾಖೆಯಿಂದ ಈಗಾಗಲೇ ಬಿತ್ತನೆ ಬೀಜ ಸಾವಯವ ಗೊಬ್ಬರ ಕೀಟನಾಶಕ ಹಾಗೂ ಲಘು ಪೋಷಕಾಂಶಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ ರೈತರು ರೈತ ಸಂಪರ್ಕ ಕೇಂದ್ರಗಳಿಂದ ಪಡೆದುಕೊಳ್ಳುವಂತೆ ತಿಳಿಸಿದರು.