
ಪಿರಿಯಾಪಟ್ಟಣ: ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವ ಪೀಳಿಗೆ ಪಾತ್ರ ಅಪಾರವಾದದು ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ಗೋಣಿಕೊಪ್ಪ ರಸ್ತೆಯ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 76 ನೇ ಸ್ವಾತಂತ್ರ್ಯ ದಿನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ದೇಶ ಸ್ವತಂತ್ರಗೊಳ್ಳಲು ಅನೇಕ ಮಹನೀಯರ ತ್ಯಾಗ ಬಲಿದಾನ ಕಾರಣವಾಗಿದೆ, ಮಹನೀಯರ ಬಗ್ಗೆ ವಿದ್ಯಾರ್ಥಿ ಜೀವನದಿಂದಲೇ ಅರಿತು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕಿದೆ, ನಮ್ಮಲ್ಲಿನ ಅಸಮಾನತೆಯ ಮನೋಭಾವದಿಂದಾಗಿ ಸ್ವಾತಂತ್ರ ಹರಣ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ, ಪ್ರತಿ ಸಮುದಾಯಕ್ಕೂ ಸಮಾನತೆ ಮತ್ತು ಸಾಮರಸ್ಯ ಕಲ್ಪಿಸುವ ಜಾತ್ಯತೀತ ಮನೋಭಾವ ಬೆಳೆಸಿಕೊಂಡು ನಾವೆಲ್ಲ ಒಂದೇ ಎಂಬ ಭಾವನೆಯಲ್ಲಿ ಉತ್ತಮ ಸಮಾಜ ನಿರ್ಮಿಸಲು ಶ್ರಮಿಸಬೇಕು ಆಗ ಮಾತ್ರ ಸ್ವಾತಂತ್ರ ಪಡೆಯಲು ಶ್ರಮಿಸಿದ ಮಹನೀಯರಿಗೆ ಗೌರವ ನೀಡಿದಂತಾಗುತ್ತದೆ ಎಂದರು.
ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ.ಎಸ್ ರಘು ಅವರು ಪ್ರಧಾನ ಭಾಷಣ ಮಾಡಿ ಮಾತನಾಡಿ ಬ್ರಿಟಿಷರ ಆಳ್ವಿಕೆಯಲ್ಲಿದ್ದ ದೇಶ ಸ್ವಾತಂತ್ರ್ಯ ಗಳಿಸಲು ನಾಯಕತ್ವ ಮತ್ತು ಸಹಮತದ ಕೊರತೆ ಎದ್ದು ಕಾಣುತ್ತಿತ್ತು ಇಂತಹ ಸಂದರ್ಭ ಮಹಾತ್ಮ ಗಾಂಧೀಜಿಯವರು ಸ್ವತಂತ್ರ ಹೋರಾಟದ ನೇತೃತ್ವವಹಿಸಿ ಸತ್ಯಾಗ್ರಹ ಅಸಹಕಾರ ಚಳುವಳಿಗಳ ಮೂಲಕ ಶಾಂತಿಯುತವಾಗಿ ಸ್ವಾತಂತ್ರ್ಯ ತಂದು ಕೊಟ್ಟರು ನಂತರ ಈಚಿನ ದಿನಗಳಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ದಕ್ಷ ಆಡಳಿತದಿಂದ ಭಾರತ ಎಂದರೆ ನಿರ್ಲಕ್ಷ್ಯ ವಹಿಸುತ್ತಿದ್ದ ಪಾಶ್ಚಿಮಾತ್ಯ ದೇಶಗಳು ನಮತ್ತ ತಿರುಗಿ ನೋಡುತ್ತಿವೆ ಆದ್ದರಿಂದ ಪ್ರತಿಯೊಬ್ಬ ಪ್ರಜೆಯು ದೇಶಾಭಿಮಾನ ಮೈಗೂಡಿಸಿಕೊಂಡು ದೇಶದ ಉನ್ನತಿಗೆ ಮುಂದಾಗಬೇಕು ಎಂದರು.
ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಧ್ವಜಾರೋಹಣ ನೆರವೇರಿಸಿ ಧ್ವಜ ಸಂದೇಶ ನೀಡಿ ಮಾತಾನಾಡಿ ದೇಶ ಕಾಯುವ ಸೈನಿಕರು, ರೈತರು, ವಿಜ್ಞಾನಿಗಳು, ಶಿಕ್ಷಕರು ಭಾರತ ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಸರ್ಕಾರಗಳು ಅನೇಕ ಯೋಜನೆಗಳನ್ನು ಜನರಿಗೆ ನೀಡುವುದರ ಮೂಲಕ ಅಭಿವೃದ್ಧಿಯತ್ತ ಸಾಗಿ ಆರ್ಥಿಕವಾಗಿ ಮುನ್ನುಗ್ಗಿ ಬಾಹ್ಯ ಶಕ್ತಿಗಳಿಂದ ದೇಶವನ್ನು ರಕ್ಷಿಸುತ್ತಿವೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಕನ್ನಂಬಾಡಿಯಮ್ಮ ದೇವಾಲಯ ಬಳಿಯಿಂದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳ ಮೆರವಣಿಗೆ ಜತೆ ವೇದಿಕೆ ಕಾರ್ಯಕ್ರಮ ಸ್ಥಳಕ್ಕೆ ಶಾಸಕ ಕೆ.ಮಹದೇವ್ ಕಾಲ್ನಡಿಗೆಯಲ್ಲಿ ಸಾಗಿದರು, ಧ್ವಜಾರೋಹಣ ನಂತರ ಪೊಲೀಸರು ಹಾಗೂ ಶಾಲಾ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು, ಮಾಜಿ ಸೈನಿಕರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು, ವಿವಿಧ ಇಲಾಖೆ ಯೋಜನೆ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು, ವೀರಗಾಸೆ, ಡೊಳ್ಳುಕುಣಿತ, ಟಿಬೇಟಿಯನ್ ಹಾಗು ಕೊಡವ ನೃತ್ಯ, ಕೇರಳ ಚಂಡೆವಾದ್ಯ, ಆದಿವಾಸಿ-ಬುಡಕಟ್ಟು ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಇಲಾಖೆ ಸಿಬ್ಬಂದಿ ನೃತ್ಯ ಮತ್ತು ನಾಟಕ, ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಚಿಣ್ಣರು ಸ್ವತಂತ್ರ ಹೋರಾಟಗಾರರ ಛದ್ಮವೇಷ ಧರಿಸಿ ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಪುರಸಭೆ ಅಧ್ಯಕ್ಷ ಕೆ.ಮಹೇಶ್, ಉಪಾಧ್ಯಕ್ಷೆ ಆಶಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ ಹಾಗೂ ಸದಸ್ಯರು, ಟಿಎಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಬಿಇಒ ಬಸವರಾಜು , ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಇನ್ಸ್ ಪೆಕ್ಟರ್ ಜಗದೀಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ತಾಲ್ಲೂಕು ಆಡಳಿತ ಕಚೇರಿ ಸಿಬ್ಬಂದಿ ಇದ್ದರು.













