ಪಿರಿಯಾಪಟ್ಟಣದಲ್ಲಿ ನಡೆಯಲಿರುವ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಲು ಶಾಸಕ ಕೆ.ಮಹದೇವ್ ಅವರ ನೇತೃತ್ವ ಪೂರ್ವಭಾವಿ ಸಭೆ ನಡೆಯಿತು 

ಪಿರಿಯಾಪಟ್ಟಣ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದಲ್ಲಿ ನಡೆಯಲಿರುವ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯತಿ ನೇತೃತ್ವ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸನ್ನದ್ಧರಾಗಿದ್ದು ಸಿದ್ಧತೆಗಳು ಭರದಿಂದ ಸಾಗಿವೆ.

ಶಾಸಕ ಕೆ.ಮಹದೇವ್ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಗೋಣಿಕೊಪ್ಪ ರಸ್ತೆಯ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆ.15 ರಂದು ನಡೆಯಲಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಯಾವುದೇ ಕುಂದು ಕೊರತೆ ಎದುರಾಗದೆ ಅದ್ದೂರಿಯಾಗಿ ಆಚರಿಸಲು ತಾಲ್ಲೂಕಿನ ಎಲ್ಲಾ ಇಲಾಖೆಗಳು ಪೂರ್ವ ತಯಾರಿಯಲ್ಲಿ ತೊಡಗಿವೆ.

ಪೂರ್ವಭಾವಿ ಸಭೆ: ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಶಾಸಕ ಕೆ.ಮಹದೇವ್ ಅವರ ಸಮ್ಮುಖ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮುಖಂಡರುಗಳ ಸಭೆ ನಡೆಸಿ ತಾಲ್ಲೂಕಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿ ಅದರಂತೆ ತಾಲ್ಲೂಕು ಆಡಳಿತ ನೇತೃತ್ವ ಹಲವು ಪೂರ್ವಭಾವಿ ಸಭೆ ನಡೆಸಿ ವಿವಿಧ ಇಲಾಖೆಗಳ ಮೇಲುಸ್ತುವಾರಿಯಲ್ಲಿ ಹಲವು ಸಮಿತಿಗಳನ್ನು ರಚಿಸಿ ಆಯಾ ಸಮಿತಿಗೆ ನೀಡಿರುವ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಲಾಗಿದೆ. 

ಹರ್ ಘರ್ ತಿರಂಗಕ್ಕೆ ಚಾಲನೆ: ತಾಲ್ಲೂಕು ಪಂಚಾಯತಿ ನೇತೃತ್ವ ತಾಲ್ಲೂಕಿನ ಎಲ್ಲಾ ಗ್ರಾ.ಪಂ ಗಳಲ್ಲಿ ಆಯಾ ವ್ಯಾಪ್ತಿಯ ಮನೆ ಮನೆಗಳಿಗೆ ರಾಷ್ಟ್ರಧ್ವಜ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಪಟ್ಟಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಮಹದೇವ್ ಅವರು ಚಾಲನೆ ನೀಡಿ ಧ್ವಜ ಸಂಹಿತೆ ಪ್ರಕಾರ ಪ್ರತಿಯೊಂದು ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ.

ವಿಶೇಷ ಮೆರವಣಿಗೆ: ತಾಲ್ಲೂಕಿನ ವಿವಿಧ ಇಲಾಖೆಗಳು ತಮ್ಮ ಇಲಾಖಾವಾರು ಮಾಹಿತಿ ನೀಡುವ 12 ಸ್ತಬ್ಧಚಿತ್ರ ಮತ್ತು ತಾಲ್ಲೂಕಿನ 34 ಗ್ರಾ.ಪಂ ಗಳ ವಿಶೇಷ ಸ್ತಬ್ಧಚಿತ್ರ ಜತೆಗೆ ಜಾನಪದ ಕಲಾ ತಂಡಗಳು ಮತ್ತು ಶಾಲಾ ವಿದ್ಯಾರ್ಥಿಗಳ ಪಥ ಸಂಚಲನಕ್ಕೆ ಆ.15 ರ ಬೆಳಿಗ್ಗೆ 7.30 ಕ್ಕೆ ಪಟ್ಟಣದ ಶ್ರೀಕನ್ನಂಬಾಡಿಯಮ್ಮ ದೇವಾಲಯ ಬಳಿ ಚಾಲನೆ ದೊರೆಯಲಿದ್ದು  ಪಟ್ಟಣದ ಗೋಣಿಕೊಪ್ಪ ರಸ್ತೆಯ ಜ್ಯೂನಿಯರ್ ಕಾಲೇಜು ಮೈದಾನದವರೆಗೆ ಮೆರವಣಿಗೆ ಸಾಗಲಿದೆ.

ವೇದಿಕೆ ಕಾರ್ಯಕ್ರಮ: ಪಟ್ಟಣದ ಗೋಣಿಕೊಪ್ಪ ರಸ್ತೆಯ ಜ್ಯೂನಿಯರ್ ಕಾಲೇಜು ಆವರಣದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಸೇರಿದಂತೆ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಮತ್ತು ಮಾಜಿ ಸೈನಿಕರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದ್ದು ಸುಮಾರು 3 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಕಾರ್ಯಕ್ರಮವನ್ನು ಕುಳಿತು ವೀಕ್ಷಿಸಲು ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಕಾರ್ಯಕ್ರಮ ಮುಗಿದ ನಂತರ ಉಪಾಹಾರ ವ್ಯವಸ್ಥೆ ಮಾಡಲಾಗುತ್ತಿದೆ.

ಒಟ್ಟಾರೆ ತಾಲ್ಲೂಕಿನಲ್ಲಿ ಜರುಗಲಿರುವ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಮಾದರಿಯಾಗಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಕೆ.ಮಹದೇವ್, ಶಾಸಕರು : 75 ನೇ ಸ್ವಾತಂತ್ರ್ಯ  ಅಮೃತ ಮಹೋತ್ಸವ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿ ಪೂರ್ವ ಸಿದ್ಧತೆಗಳನ್ನು ಕೈಗೊಂಡಿದ್ದು ತಾಲ್ಲೂಕಿನ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸಿಗೆ ಸಹಕರಿಸಬೇಕು.     

ಕೆ.ಚಂದ್ರಮೌಳಿ, ತಹಸೀಲ್ದಾರ್ : ತಾಲ್ಲೂಕು ಆಡಳಿತ ವತಿಯಿಂದ ನಡೆಯುವ ಕಾರ್ಯಕ್ರಮಕ್ಕೆ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು, ವಿವಿಧ ಇಲಾಖೆಗಳ ನೇತೃತ್ವ ಸಮಿತಿ ರಚಿಸಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ಸಿಗೆ ಸಿದ್ಧತೆ ಕೈಗೊಳ್ಳಲಾಗಿದೆ.

ಸಿ.ಆರ್ ಕೃಷ್ಣಕುಮಾರ್, ತಾ.ಪಂ ಇಒ : ತಾಲ್ಲೂಕಿನ ಪ್ರತಿ ಗ್ರಾ.ಪಂ ಗಳ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು ಹರ್ ಘರ್ ತಿರಂಗ ಕಾರ್ಯಕ್ರಮ ಯಶಸ್ವಿಗೊಳಿಸಲು ಗ್ರಾಮಾಂತರ ಪ್ರದೇಶದಲ್ಲಿ ಇಪ್ಪತ್ತೈದು ಸಾವಿರ ಹಾಗೂ ನಗರ ಪ್ರದೇಶದಲ್ಲಿ ಐದು ಸಾವಿರ ರಾಷ್ಟ್ರಧ್ವಜಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ.

Leave a Comment

Your email address will not be published. Required fields are marked *

error: Content is protected !!
Scroll to Top