
ಪಿರಿಯಾಪಟ್ಟಣ: ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಮೂರು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿದ ದೊಡ್ಡಹರವೆ ಒಂದನೇ ಬ್ಲಾಕ್ ನ ಘಟನಾ ಸ್ಥಳಕ್ಕೆ ಶಾಸಕ ಕೆ.ಮಹದೇವ್ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿ ತಾಲ್ಲೂಕು ಆಡಳಿತ ಮೂಲಕ ಎಂಬತ್ತು ಸಾವಿರ ಹಣದ ಪರಿಹಾರ ಚೆಕ್ ವಿತರಿಸಿದರು.
ಶುಕ್ರವಾರ ಬೆಳಗಿನ ಜಾವ ಸಮಯದಲ್ಲಿ ಬಿದ್ದ ಭಾರಿ ಮಳೆಗೆ ದೊಡ್ಡಹರವೆ ಒಂದನೇ ಬ್ಲಾಕ್ ನಿವಾಸಿ ಪ್ರೇಮ ಎಂಬುವರಿಗೆ ಸೇರಿದ ವಾಸದ ಮನೆ ಗೋಡೆ ಕುಸಿದು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಮೂರು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ದೊಡ್ಡಹರವೆ ಮತ ಕ್ಷೇತ್ರದ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಎಸ್.ರಾಮು ಅವರು ಸರ್ಕಾರ ನೊಂದ ಕುಟುಂಬಕ್ಕೆ ಶೀಘ್ರ ಪರಿಹಾರ ಒದಗಿಸಿ ಕೊಡುವಂತೆ ಕೋರಿದ್ದರು.
ಶಾಸಕ ಕೆ.ಮಹದೇವ್ ಅವರು ಅಧಿಕಾರಿಗಳೊಂದಿಗೆ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಹಸುಗಳು ಸಾವನ್ನಪ್ಪಿದ ಹಿನ್ನೆಲೆ ಪರಿಹಾರ ಚೆಕ್ ವಿತರಿಸಿ ಮನೆ ಕುಸಿತಕ್ಕೆ ಶೀಘ್ರ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ಕೊಪ್ಪ ಗ್ರಾ.ಪಂ ಅಧ್ಯಕ್ಷ ರೇಣುಕಾಸ್ವಾಮಿ, ತಾ.ಪಂ ಮಾಜಿ ಸದಸ್ಯ ಎಸ್.ರಾಮು, ಹಾರನಹಳ್ಳಿ ಹೋಬಳಿ ವ್ಯಾಪ್ತಿಯ ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ, ಆವರ್ತಿ ಗ್ರಾ.ಪಂ ಸದಸ್ಯ ಮುತ್ತಿನಮುಳುಸೋಗೆ ಶಿವಕುಮಾರ್, ಮುಖಂಡರಾದ ನವಿಲೂರು ಚನ್ನಪ್ಪ, ಚಂದ್ರಶೇಖರ್, ವಿದ್ಯಾಶಂಕರ್ ಮತ್ತಿತರಿದ್ದರು.