
ಪಿರಿಯಾಪಟ್ಟಣ: ತಾಲೂಕಿನ ಪಾರೆಕೊಪ್ಪಲು ಗ್ರಾಮದಲ್ಲಿ ನೂತನ ಪಡಿತರ ಉಪ ಕೇಂದ್ರಕ್ಕೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ತಾಲ್ಲೂಕಿನಾದ್ಯಂತ ದೂರದ ಊರುಗಳಿಂದ ಪಡಿತರ ತರುತ್ತಿರುವ ಹಳ್ಳಿಗಳಿಗೆ ನೂತನವಾಗಿ ಪಡಿತರ ಉಪಕೇಂದ್ರ ಮಂಜೂರು ಮಾಡಿ ತಮ್ಮ ಗ್ರಾಮಗಳಲ್ಲಿಯೇ ಪಡಿತರ ದೊರೆಯುವಂತೆ ಮಾಡಲಾಗಿದೆ, ಗ್ರಾಮಾಂತರ ಪ್ರದೇಶಗಳಲ್ಲಿ ಸೂಕ್ತ ವಾಹನ ಸೌಲಭ್ಯ ಇಲ್ಲದೆ ಬೇರೆ ಗ್ರಾಮಗಳಿಂದ ಮಹಿಳೆಯರು ಮಕ್ಕಳು ವಯೋವೃದ್ಧರು ಪಡಿತರ ತರಲು ಪಡುತ್ತಿದ್ದ ಸಂಕಷ್ಟ ಮನಗಂಡು ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಅವರಿಗೆ ಉಪ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದ್ದು ಅದರಂತೆ ಆಧ್ಯತೆಗನುಸಾರ ಹಂತಹಂತವಾಗಿ ತಾಲ್ಲೂಕಿನ ವಿವಿಧೆಡೆ ಇಲಾಖೆ ನಿಯಮಾನುಸಾರ ಉಪಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ತಮ್ಮ ಊರುಗಳಲ್ಲಿಯೇ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು ಸಾರ್ವಜನಿಕರು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ತಾಲ್ಲೂಕಿನ ವಿವಿಧೆಡೆಯ ಯಾವುದೇ ಗ್ರಾಮದವರು ನೀಡುವ ಸಮಸ್ಯೆ ಅರ್ಜಿಯನ್ನು ಪಕ್ಷಾತೀತವಾಗಿ ಬಗೆಹರಿಸಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ್ದೇನೆ ಎಂದರು.
ಈ ವೇಳೆ ಗ್ರಾಮಸ್ಥರು ಶಾಸಕ ಕೆ.ಮಹದೇವ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭ ತಹಸೀಲ್ದಾರ್ ಕೆ.ಚಂದ್ರಮೌಳಿ, ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ನಿರೀಕ್ಷಕರಾದ ಸಂದೀಪ್, ಮಂಜುನಾಥ್, ಮಾಲಂಗಿ ಗ್ರಾ.ಪಂ ಅಧ್ಯಕ್ಷ ರವಿ, ಉಪಾಧ್ಯಕ್ಷೆ ಯಾಸ್ಮಿನ್ ತಾಜ್, ಪಿಡಿಒ ಆಶಾ, ಮುಖಂಡರುಗಳಾದ ಚಂದ್ರು, ಸೋಮಣ್ಣ, ರಫೀಕ್, ಇಲಿಯಾಸ್ ಖಾನ್, ವಿದ್ಯಾಶಂಕರ್, ಕುಮಾರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.