ಪಿರಿಯಾಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ನಡೆದ ಡಿ.ದೇವರಾಜು ಅರಸು ಅವರ ಜನ್ಮ ದಿನ ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್ ಹಾಗೂ ಗಣ್ಯರು ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು 

ಪಿರಿಯಾಪಟ್ಟಣ: ಸಮಾಜದಲ್ಲಿ ಹಿಂದುಳಿದ ಹಾಗೂ ಬಡವರ ಪರ ಧ್ವನಿಯಾಗಿ ನಿಂತ ಡಿ.ದೇವರಾಜ ಅರಸು ಅವರು ಅಭಿವೃದ್ಧಿಯ ಹರಿಕಾರರಾಗಿದ್ದರು ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಎಲ್ಲರಿಗೂ ಅನುಕೂಲ ಮಾಡಿಕೊಡಲು ಹೋಗಿ ಅವರ ರಾಜಕೀಯ ಜೀವನ ಹಳಿತಪ್ಪುವಂತಾಗಿದ್ದು ದುರದೃಷ್ಟಕರ,  ಅವರ ಏಳಿಗೆಯನ್ನು ಸಹಿಸದ ಕೆಲವು ಸ್ವಪಕ್ಷಿಯರ ಪಿತೂರಿಯಿಂದ ಅರಸು ಅವರನ್ನು ಮೂಲೆಗುಂಪು ಮಾಡಲಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಧಾನ ಭಾಷಣಕಾರರಾಗಿ ರಾಜೇ ಅರಸ್ ಅವರು ಮಾತನಾಡಿ ವರ್ಣಮಯ ವ್ಯಕ್ತಿತ್ವ ಹೊಂದಿದ್ದ ಅರಸು ಅವರು ಕರ್ನಾಟಕ ರಾಜ್ಯ ರಾಜಕಾರಣಕ್ಕೆ ಹೊಸ ಆಯಾಮ ನೀಡಿದವರು, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಹಾವನೂರ್ ವರದಿಯ ಮೂಲಕ ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವ ದಿಟ್ಟ ನಿರ್ಧಾರ ಕೈಗೊಂಡಿದ್ದರು ಎಂದರು.

ಈ ವೇಳೆ ಹಾಸ್ಟೆಲ್ ನಲ್ಲಿದ್ದು ಪಿಯುಸಿ ವ್ಯಾಸಂಗ ಮಾಡಿ ಉತ್ತಮ ಅಂಕಗಳಿಸಿದ  ವಿದ್ಯಾರ್ಥಿಗಳಾದ ಸಿಂಚನ ಮತ್ತು ನಿಶಾಂತ್ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು, ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿದ್ದು ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಾದ ಜೆ.ರಕ್ಷಿತ್ ಮತ್ತು ಕೇಶವಮೂರ್ತಿ ವಸತಿ ನಿಲಯಕ್ಕೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದರಿಂದ ಶಾಸಕ ಕೆ.ಮಹದೇವ್ ವೈಯಕ್ತಿಕವಾಗಿ ತಲಾ ಎರಡು ಸಾವಿರ ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.

ಈ ಸಂದರ್ಭ ಪುರಸಭೆ ಅಧ್ಯಕ್ಷ ಕೆ ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಸದಸ್ಯರಾದ ಪ್ರಕಾಶ್ ಸಿಂಗ್, ರವಿ, ಚಾಮರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಎ ನಾಗೇಂದ್ರ, ನಿರ್ದೇಶಕಿ ಸುನೀತ ಮಂಜುನಾಥ್, ಗ್ರಾ.ಪಂ ಸದಸ್ಯೆ ಪ್ರೀತಿ ಅರಸ್, ತಾ.ಪಂ ಮಾಜಿ ಸದಸ್ಯರಾದ ಎಸ್ ರಾಮು, ಎ.ಟಿ ರಂಗಸ್ವಾಮಿ, ಬಿಸಿಎಂ ವಿಸ್ತರಣಾಧಿಕಾರಿ ಪ್ರೇಮ್ ಕುಮಾರ್, ಎಡಿಎಲ್ ಆರ್ ಚಿಕ್ಕಣ್ಣ, ಸಿಡಿಪಿಓ ಮಮತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ  ಸಿದ್ದೇಗೌಡ, ಮುಖಂಡರಾದ ಅಣ್ಣಯ್ಯಶೆಟ್ಟಿ  ಎನ್.ಆರ್ ಕಾಂತರಾಜು, ನಿಲಯ ಪಾಲಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಮಾಜದ ಮುಖಂಡರು ಇದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top