
ಪಿರಿಯಾಪಟ್ಟಣ: ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಅಧಿಕಾರಿ ಹಾಗೂ ಗುತ್ತಿಗೆದಾರರು ಇಲ್ಲಸಲ್ಲದ ನೆಪ ಹೇಳುವ ಬದಲು ಶೀಘ್ರ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ಸೂಚಿಸಿದರು.
ತಾಲ್ಲೂಕಿನ ಮುತ್ತಿನ ಮುಳಸೋಗೆ ಬಳಿ 295 ಕೋಟಿ ವೆಚ್ಚದಲ್ಲಿ ಕಾವೇರಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು, 2017 ರಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿದ್ದು 2019 ರೊಳಗೆ ಪೂರ್ಣಗೊಳ್ಳಬೇಕಿತ್ತು ಆದರೆ ಕಾಮಗಾರಿ ಇನ್ನೂ ಸಂಪೂರ್ಣ ಮುಗಿಯದೇ ಪ್ರಗತಿ ಹಂತದಲ್ಲಿದೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ನೆಪಗಳನ್ನು ಹೇಳದೆ ಸೆಪ್ಟೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು, ಯೋಜನೆ ಪೂರ್ಣಗೊಂಡರೆ ಪಿರಿಯಾಪಟ್ಟಣ ತಾಲ್ಲೂಕಿನ 150 ಕ್ಕೂ ಹೆಚ್ಚು ಕೆರೆ ಕಟ್ಟೆಗಳಿಗೆ ಕಾವೇರಿ ನೀರು ಪೂರೈಕೆಯಾಗಲಿದ್ದು 79 ಹಳ್ಳಿಗಳ ಸುಮಾರು 60 ಸಾವಿರ ಜನರಿಗೆ ಮತ್ತು ಅಲ್ಲಿನ ಜಾನುವಾರುಗಳಿಗೆ ಅನುಕೂಲವಾಗಲಿದೆ, ಈಗಾಗಲೇ ಈ ಯೋಜನೆಗೆ 133 ಕೋಟಿ ಹಣ ಬಿಡುಗಡೆಯಾಗಿದ್ದು ಕಾಮಗಾರಿ ಶೀಘ್ರ ಮುಗಿಸಿದರೆ ಉಳಿಕೆ ಹಣ ಬಿಡುಗಡೆ ಮಾಡಲಾಗುವುದು, ಗುತ್ತಿಗೆದಾರರು ದಾನ ಧರ್ಮಕ್ಕೆ ಕೆಲಸ ಮಾಡುವುದಿಲ್ಲ ನಾವು ಹಣ ನೀಡುತ್ತಿದ್ದೇವೆ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು ಈಗಾಗಲೇ ಕೆಲಸ ತಡವಾಗಿದ್ದು ಮತ್ತಷ್ಟು ತಡವಾದರೆ ಅವರನ್ನು ಕಪ್ಪು ಪಟ್ಟಿಗೆ ಸೇರಿದಲು ಸೂಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ಕಾವೇರಿ ನದಿ ಪ್ರವಾಹ ಹಾಗೂ ಕೊವಿಡ್ ನಿಂದಾಗಿ ಕೆಲಸ ವಿಳಂಬವಾಗಿದ್ದರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸತತ ಸಭೆ ನಡೆಸಿ ಯೋಜನೆ ಶೀಘ್ರ ಮುಕ್ತಾಯಗೊಳಿಸಲು ಕ್ರಮ ವಹಿಸಲಾಗಿದೆ ಎಂದರು.
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ ಸಚಿವರಿಗೆ ಯೋಜನೆಯ ಮಾಹಿತಿ ನೀಡಿದರು.
ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಗಳಾದ ವೆಂಕಟೇಶ್, ಸೂಪರಿಡೆಂಟ್ ಇಂಜಿನಿಯರ್ ಚನ್ನಕೇಶವ ಮತ್ತು ಮೋಹನ್ ಕುಮಾರ್, ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಕೆ ನವೀನ್, ಕಲೀಂ, ಲಕ್ಷ್ಮಿ ಸಿವಿಲ್ ಎಂಜಿನಿಯರಿಂಗ್ ಪ್ರವೇಟ್ ಲಿಮಿಟೆಡ್ ನ ಜನರಲ್ ಮ್ಯಾನೇಜರ್ ರವಿಕುಮಾರ್, ಪ್ರಾಜೆಕ್ಟ್ ಇಂಜಿನಿಯರ್ ವಿನೋದ್ ಕುಮಾರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ, ಯುವಮೋರ್ಚಾ ಅಧ್ಯಕ್ಷ ಪ್ರವೀಣ್ ಶೆಟ್ಟಿ, ದೊಡ್ಡಕಮರವಳ್ಳಿ ಗ್ರಾ.ಪಂ ಅಧ್ಯಕ್ಷ ಚಂದ್ರೇಗೌಡ, ಗ್ರಾ.ಪಂ ಸದಸ್ಯರಾದ ಮುತ್ತಿನಮುಳಸೋಗೆ ಶಿವಕುಮಾರ್, ಮಂಜುನಾಥ್, ಮೋಹನ್ ಕುಮಾರ್, ಮುಖಂಡರಾದ ಲೋಕಪಾಲಯ್ಯ, ಮಹದೇವ್, ಮಧುಗೌಡ, ಉಪ ತಹಶೀಲ್ದಾರ್ ಮಹೇಶ್, ಕಂದಾಯಾಧಿಕಾರಿ ಎನ್.ಕೆ ಪ್ರದೀಪ್, ಇನ್ಸ್ ಪೆಕ್ಟರ್ ಜಗದೀಶ್, ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಎಂ. ಯತ್ತಿನಮನಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.