ಪಿರಿಯಾಪಟ್ಟಣ :
ಆರ್ಥಿಕವಾಗಿ ರೈತರನ್ನು ಮೇಲೆತ್ತುವ ಉದ್ದೇಶದಿಂದ ಸರ್ಕಾರ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.
ತಾಲ್ಲೂಕಿನ ಸಂಗರಶೆಟ್ಟಹಳ್ಳಿ ಮತ್ತು ಸೂಳೆ ಕೋಟೆ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರಾಗಿ ಬೆಳೆ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು. ಈ ಭಾಗದ ರೈತರು ಎರಡನೇ ಬೆಳೆಯಾಗಿ ರಾಗಿಯನ್ನು ಬೆಳೆಯನ್ನು ಅವಲಂಬಿಸಿರುತ್ತಾರೆ, ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ಪಡೆಯುವುದರಿಂದ ಅವರು ಆರ್ಥಿಕವಾಗಿ ಸಬಲರಾಗಬಹುದು. ಇದಲ್ಲದೆ ರೈತರು ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿ ಹೆಚ್ಚು ಆದಾಯ ಗಳಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಪ್ರಸಾದ್ ಮಾತನಾಡಿ ಪಿರಿಯಾಪಟ್ಟಣ ತಾಲ್ಲೂಕಿನ ನಾಲ್ಕು ಹೋಬಳಿಯಲ್ಲಿ ತಲಾ ಒಂದೊಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ, ಔಷಧಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಮಲ್ಲಿಕಾರ್ಜುನ್, ಸುಬ್ರಹ್ಮಣ್ಯ, ಮುರುಳಿಧರ, ಬಸವರಾಜು, ಮಂಜುನಾಥ್, ಸ್ವಾಮಿಗೌಡ, ನಟೇಶ್, ಶಿರಿಯಾಳಶೆಟ್ಟಿ,ದೇವರಾಜು, ಪುಟ್ಟರಾಜು,ಮಹೇಶ್, ಸತೀಶ್ ಸೇರಿದಂತೆ ಗ್ರಾಮಸ್ಥರು ಇದ್ದರು.