
ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತಾನಹರಣ ಚಿಕಿತ್ಸೆಗೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು.
ಈ ವೇಳೆ ಶಾಸಕರು ಮಾತನಾಡಿ ಶಾಸಕನಾದ ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಗುಣಮಟ್ಟದ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಂಡು ಸರ್ಕಾರದ ಗಮನ ಸೆಳೆದು ಆಸ್ಪತ್ರೆಗೆ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ, ಆಸ್ಪತ್ರೆಯ ಕೆಲ ವೈದ್ಯರು ರೋಗಿಗಳನ್ನು ಚಿಕಿತ್ಸೆಗೆಂದು ಖಾಸಗಿ ಕ್ಲಿನಿಕ್ ಹಾಗೂ ಲ್ಯಾಬ್ ಗಳಿಗೆ ಕಳಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು ಅಂತಹವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಮುಂದಿನ ದಿನಗಳಲ್ಲಿ ತಾಲ್ಲೂಕಿನ ಜನತೆಗೆ ಉತ್ತಮ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿ ಸ್ಕ್ಯಾನಿಂಗ್ ಹಾಗೂ ಇತರೆ ಪರೀಕ್ಷೆಗಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ನಡೆಸಲು ಅಗತ್ಯವಿರುವ ಸೌಕರ್ಯ ಕೊರತೆ ಬಗ್ಗೆ ಮಾಹಿತಿ ನೀಡಿದರೆ ಸರ್ಕಾರದ ಗಮನ ಸೆಳೆದು ಬಗೆಹರಿಸುವುದಾಗಿ ಸೂಚಿಸಿದರು.
ಈ ಸಂದರ್ಭ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ದೇವಿಕಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಪ್ರಸೂತಿ ತಜ್ಞ ಡಾ.ಪ್ರಭು, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶುಭಗೌಡ, ಟಿ.ರಮೇಶ್, ನಿಜಾಮುದ್ದೀನ್, ಹರೀಶ್, ಮೈಲಾರಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡ ರಘುನಾಥ್ ಸೇರಿದಂತೆ ಆಸ್ಪತ್ರೆ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಇದ್ದರು.