
ಪಿರಿಯಾಪಟ್ಟಣ: ತಾಲ್ಲೂಕಿನ ಬೆಕ್ಕರೆ ಗ್ರಾಮದ ದೊಡ್ಡಕೆರೆ ಏರಿ ಕುಸಿದ ಸ್ಥಳಕ್ಕೆ ಶಾಸಕ ಕೆ.ಮಹದೇವ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕೆರೆ ಏರಿ ಒಡೆದ ವಿಷಯ ತಿಳಿದ ಶಾಸಕ ಕೆ.ಮಹದೇವ್ ಅವರು ನಿಗದಿತ ಹಲವು ಸರ್ಕಾರಿ ಕಾರ್ಯಕ್ರಮಗಳನ್ನು ಮುಗಿಸಿ ಭಾನುವಾರ ಸಂಜೆ ವೇಳೆಗೆ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು, ಈ ವೇಳೆ ಭುವನಹಳ್ಳಿ ಗ್ರಾಮದ ಯಜಮಾನರಾದ ಈಶ್ವರಯ್ಯ ಅವರು ಮಾತನಾಡಿ ಕೆರೆ ಏರಿ ಒಡೆದಿರುವುದರಿಂದ ಸುತ್ತಮುತ್ತಲ ನೂರಾರು ಎಕರೆ ಜಮೀನಿಗೆ ಹಾನಿಯುಂಟಾಗಿದ್ದು ಸೂಕ್ತ ಪರಿಹಾರ ಒದಗಿಸಿ ಶೀಘ್ರ ಕೆರೆ ಏರಿ ದುರಸ್ತಿಪಡಿಸಲು ಅಗತ್ಯ ಕ್ರಮ ಕೈಗೊಂಡು ಸ್ಥಳೀಯ ರೈತರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸುವಂತೆ ಮನವಿ ಮಾಡಿದಾಗ ಶಾಸಕ ಕೆ.ಮಹದೇವ್ ಅವರು ಜಿಲ್ಲಾ ಪಂಚಾಯತಿ, ನೀರಾವರಿ, ಕಂದಾಯ ಹಾಗೂ ಸ್ಥಳಿಯ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕೆರೆ ಏರಿ ದುರಸ್ತಿ ಪಡಿಸಲು ಶೀಘ್ರ ಕ್ರಮ ವಹಿಸಿ ಸಮಸ್ಯೆ ಬಗೆಹರಿಸಿದ ನಂತರ ಮಾಹಿತಿ ನೀಡಲು ಸೂಚಿಸಿದರು.
ಸೋಮವಾರ ಸ್ಥಳಕ್ಕಾಗಮಿಸಿದ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಕೆರೆ ಏರಿ ದುರಸ್ತಿಪಡಿಸಿ ಪೋಲಾಗುತ್ತಿರುವ ನೀರು ತಡೆಯಲು ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿ ಮೇಲಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿ ಸ್ಥಳಿಯ ಭುವನಹಳ್ಳಿ ಗ್ರಾ.ಪಂ ವತಿಯಿಂದಲೂ ದುರಸ್ತಿಗೆ ಅನುದಾನ ಮಂಜೂರು ಮಾಡುವ ಭರವಸೆ ನೀಡಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ಕಾರ್ಯಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಭೇಟಿ ನೀಡಿ ಮಾತನಾಡಿ ಬೆಳೆ ಹಾನಿಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲಿಸಿ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಂಡು ಕೆರೆ ದುರಸ್ತಿಗೆ ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಜಗದೀಶ್, ರುಕ್ಕಣ್ಣ, ಪಿಡಿಒ ದೇವರಾಜೇಗೌಡ, ತಂಬಾಕು ಮಂಡಳಿ ಕ್ರಾಪ್ ಕಮಿಟಿ ಸದಸ್ಯ ಮಹೇಶ್, ಮುಖಂಡರಾದ ಬಿ.ವಿ ಗಿರೀಶ್, ಬಿ.ಕೆ ನಾಗೇಂದ್ರ, ಹೇಮಪ್ರಭಾ, ಕಾಂತರಾಜ್, ಜಯಣ್ಣ, ಜಗದೀಶ್, ಬಸವರಾಜ್, ರವಿಕುಮಾರ್, ಸತೀಶ್, ವಸಂತ್ ಸೇರಿದಂತೆ ಬೆಕ್ಕರೆ ಭುವನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಇದ್ದರು