
ಪಿರಿಯಾಪಟ್ಟಣ: ಕಾಯಿಲೆಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆಯಲು ಆರೋಗ್ಯ ಶಿಬಿರಗಳು ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗ್ರಾಮೀಣ ದಸರಾ ಅಂಗವಾಗಿ ತಾಲ್ಲೂಕು ಆರೋಗ್ಯ ಇಲಾಖೆ ಮತ್ತು ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು, ಒತ್ತಡದ ಜೀವನದ ನಡುವೆ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸರಿಯಾದ ಸಮಯದಲ್ಲಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದರೆ ಗುಣಪಡಿಸಲು ಸಾಧ್ಯ, ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯವರು ತಾಲ್ಲೂಕಿನ ಹಲವೆಡೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಟಿಎಚ್ಒ ಡಾ.ಶರತ್ ಬಾಬು ಅವರು ಮಾತನಾಡಿ ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ಮಹಾಮಾರಿಗೆ ಸಿಲುಕಿದ ನಂತರ ಆಸ್ಪತ್ರೆಗಳ ಮಹತ್ವ ತಿಳಿದು ಬಂದಿದೆ, ಮಧುಮೇಹ ರಕ್ತದೊತ್ತಡದಂತಹ ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಮಾಹಿತಿ ನೀಡುವುದು ಆರೋಗ್ಯ ಶಿಬಿರಗಳ ಪ್ರಮುಖ ಉದ್ದೇಶವಾಗಿದೆ ಎಂದರು.
ಈ ಸಂದರ್ಭ ತಾಲ್ಲೂಕಿನಲ್ಲಿ ಪತ್ತೆಯಾಗಿರುವ 60 ಕ್ಷಯ ರೋಗಿಗಳಿಗೆ ಪ್ರೋಟಿನ್ ಪೌಡರ್ ನ 200 ಬಾಟಲ್ ಗಳನ್ನು ರೋಟರಿ ಪಿರಿಯಾಪಟ್ಟಣ ಐಕನ್ಸ್ ಸಂಸ್ಥೆ ವತಿಯಿಂದ ಉಚಿತವಾಗಿ ವಿತರಿಸಲಾಯಿತು, ಶಿಬಿರದಲ್ಲಿ ನರ, ಕ್ಯಾನ್ಸರ್, ಮೂತ್ರಕೋಶ ಹಾಗು ಸಾಮಾನ್ಯ ಕಾಯಿಲೆಗಳಿಗೆ ಸಂಬಂಧಿಸಿದಂತೆ ಮುನ್ನೂರಕ್ಕೂ ಹೆಚ್ಚು ಮಂದಿ ತಜ್ಞ ವೈದ್ಯರಿಂದ ತಪಾಸಣೆಗೊಳಪಟ್ಟರು,
ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್, ರೋಟರಿ ಪಿರಿಯಾಪಟ್ಟಣ ಐಕನ್ಸ್ ಸಂಸ್ಥೆ ಅಧ್ಯಕ್ಷ ಕೆ.ರಮೇಶ್ ಮಾತನಾಡಿದರು.
ಈ ಸಂದರ್ಭ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ದೇವಿಕಾ, ಪುರಸಭೆ ಉಪಾಧ್ಯಕ್ಷೆ ಆಶಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಸದಸ್ಯ ನಿರಂಜನ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಟಿ.ರಮೇಶ್, ಶುಭಗೌಡ, ನಿಜಾಮುದ್ದೀನ್, ಹರೀಶ್, ರೇಡಿಯಂಟ್ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಹೇಶ್, ಆರೋಗ್ಯ ಶಿಕ್ಷಣಾಧಿಕಾರಿ ಪಿ..ಪಿ ಲತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಆರ್ ಪ್ರಕಾಶ್ ಮತ್ತು ಸಾರ್ವಜನಿಕ ಆಸ್ಪತ್ರೆ ತಜ್ಞ ವೈದ್ಯರು ಸಿಬ್ಬಂದಿ ಇದ್ದರು.